ಬೆಡ್ ಸಿಗದೆ ಕೊರೊನಾ ಸೋಂಕಿತ ಬಾಣಂತಿ ಸಾವು, ತಬ್ಬಲಿಯಾದ 6 ದಿನದ ಕಂದಮ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.31- ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ಬಾಣಂತಿ ತನ್ನ ಆರು ದಿನಗಳ ಪುಟ್ಟ ಕಂದಮ್ಮನನ್ನು ಬಿಟ್ಟು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಾಗರಬಾವಿಯಲ್ಲಿ ನಡೆದಿದೆ.

ಆರು ದಿನಗಳ ಹಿಂದಷ್ಟೇ 26 ವರ್ಷದ ಮಹಿಳೆಗೆ ಡೆಲಿವರಿಯಾಗಿತ್ತು. ಮಗು ಜನನವಾದ ನಂತರ ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.ಕೊರೊನಾ ತಪಾಸಣೆ ನಡೆಸಿದಾಗ ಆಕೆಗೆ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು.

ಸೋಂಕು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಾಗಲು ನಗರದ ಹಲವಾರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಗಲಿಲ್ಲ.ತಮಗಾದ ತೊಂದರೆ ಕುರಿತಂತೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ.

ಅಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆ ಕುರಿತಂತೆ ಮಹಿಳೆಯ ಕುಟುಂಬಸ್ಥರು ಶಾಸಕಿ ಸೌಮ್ಯರೆಡ್ಡಿ ಅವರ ಗಮನಕ್ಕೆ ತಂದಿದ್ದರು. ಸೌಮ್ಯರೆಡ್ಡಿ ಅವರು ಸೋಂಕಿತ ಬಾಣಂತಿಗೆ ಬೆಡ್ ವ್ಯವಸ್ಥೆ ಮಾಡಿಕೊಡಬೇಕೆಂದು ಟ್ವಿಟ್ ಮಾಡಿದ್ದರು.

ಆದರೆ, ಯಾವುದೇ ಶಿಫಾರಸಿಗೂ ಸೋಂಕಿತ ಮಹಿಳೆಗೆ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಹೀಗಾಗಿ ಇಂದು ಬೆಳಗಿನ ಜಾವ ಬಾಣಂತಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.

ಈಗಾಗಲೇ ಹಲವಾರು ಅಮಾಯಕ ಜೀವಗಳು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ತಪ್ಪಿತಸ್ಥ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡುತ್ತಿದ್ದರೂ ಖಾಸಗಿ ವೈದ್ಯರು ಮಾತ್ರ ತಮ್ಮ ಧೋರಣೆಯನ್ನು ಮುಂದುವರಿಸುತ್ತಿರುವುದರಿಂದ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗುವವೋ ಕಾದು ನೋಡಬೇಕು.

Facebook Comments

Sri Raghav

Admin