60 ವರ್ಷ ದಾಟಿದವರಿಗೇ ಹೆಚ್ಚು ಕೊರೋನಾ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.26- ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಮಹಾಮಾರಿ ಅಟ್ಟಹಾಸಕ್ಕೆ ಹಿರಿಯ ನಾಗರಿಕರೇ ಬಲಿಯಾಗುತ್ತಿರುವುದು ಅಂಕಿ- ಅಂಶಗಳಿಂದ ದೃಢಪಟ್ಟಿದೆ.

ನಗರದಲ್ಲಿ ಇಲ್ಲಿಯವರೆಗೆ 60 ರಿಂದ 69 ವರ್ಷ ವಯಸ್ಸಿನ 242 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರ ಪೈಕಿ ಈಗಾಗಲೇ 23 ಹಿರಿಯರು ಸಾವನ್ನಪ್ಪಿದ್ದಾರೆ. ಗುಣಮುಖರಾಗಿರುವುದು ಕೇವಲ 21 ಮಂದಿ ಮಾತ್ರ.

ಉಳಿದ 195 ಮಂದಿ ಇನ್ನು ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 70 ವರ್ಷ ಮೇಲ್ಪಟ್ಟ 71 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 14 ಮಂದಿ ಮೃತಪಟ್ಟಿದ್ದರೆ, ಗುಣಮುಖರಾಗಿರುವುದು ಕೇವಲ 4 ಮಂದಿ ಮಾತ್ರ.

ಒಟ್ಟಾರೆ ಸೋಂಕಿಗೆ ಗುರಿಯಾಗುತ್ತಿರುವವರ ಸಂಖ್ಯೆಯಲ್ಲಿ ಹಿರಿಯ ನಾಗರೀಕರೇ ಮುಂದಿರುವುದರಿಂದ ಇನ್ನು ಮುಂದೆ ಅವರು ಎಚ್ಚರಿಕೆಯಿಂದಿರಬೇಕಾಗುತ್ತದೆ.

# ವೆಂಟಿಲೇಟರ್ ಕೊರತೆ:
ದಿನೇದಿನೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಐಸಿಯುಗಳಲ್ಲಿ ಚಿಕಿತ್ಸೆ ಅವಶ್ಯಕತೆ ಇರುವವರ ಪಟ್ಟಿಯೂ ಬೆಳೆಯುತ್ತಿದೆ. ಇಡೀ ರಾಜ್ಯದಲ್ಲಿ 160 ಮಂದಿ ಮಾತ್ರ ಐಸಿಯುನಲ್ಲಿದ್ದರೆ ಇವರಲ್ಲಿ ನಗರದಲ್ಲೇ 112 ಮಂದಿ ಐಸಿಯು ಅವಶ್ಯಕತೆ ಇರುವ ಸೋಂಕಿತರಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರೇ ಹೆಚ್ಚು ಸಾವನ್ನಪ್ಪುತ್ತಿರುವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‍ಗಳ ಅವಶ್ಯಕತೆಯು ಹೆಚ್ಚಾಗುತ್ತಲೇ ಇದೆ. ಇಷ್ಟಾದರೂ ಸರ್ಕಾರ ವೆಂಟಿಲೇಟರ್ ಖರೀದಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

# ಹೊರ ಭಾಗದವರೇ ತಲೆನೋವು:
ಕಳೆದ 12 ದಿನಗಳಲ್ಲಿ ನಗರದಲ್ಲಿ 1143 ಮಂದಿಗೆ ಸೋಂಕು ತಗುಲಿದ್ದರೆ ಇವರಲ್ಲಿ 617 ಮಂದಿ ಹೊರ ರಾಜ್ಯ ಹಾಗೂ ವಿದೇಶಿಗರೇ ಆಗಿರುವುದು ವಿಶೇಷ. ಹೊರ ರಾಜ್ಯದ 414 ಹಾಗೂ ವಿದೇಶದ 206 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಹೆಚ್ಚು ಸೋಂಕು ಕಾಣಿಸಿಕೊಂಡಿರುವುದರಿಂದ ಹೊರ ಭಾಗದವರೇ ತಲೆನೋವಾಗಿ ಪರಿಣಮಿಸಿದ್ದಾರೆ.

Facebook Comments