ಮನೆಯಲ್ಲೇ ಮಾಸ್ಕ್ ತಯಾರಿಸಿ ಬಳಸುವಂತೆ ಸಾರ್ವಜನಿಕರಿಗೆ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.9- ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು ಹಾಗೂ ಇತರ ಸಿಬ್ಬಂದಿಗಳಿಗೆ ಮುಖಗವಸು (ಮಾಸ್ಕ್)ಗಳ ಕೊರತೆಯಾಗಿರುವುದರಿಂದ ಸಾರ್ವಜನಿಕರು ಮನೆಯಲ್ಲೇ ತಯಾರಿಸಿದ ಮುಖಗವಸುಗಳನ್ನು ಬಳಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ನೀಡಿದೆ.

ಅನೇಕ ಸಂದರ್ಭಗಳಲ್ಲಿ ಗ್ರಾಹಕರು ವ್ಯಾಪಾರ ಮಳಿಗೆಗಳಿಗೆ ತೆರಳಿದಾಗ ಮುಖಗವಸನ್ನು ಧರಿಸುವಂತೆ ಮಳಿಗೆ ವ್ಯವಸ್ಥಾಪಕರು ಒತ್ತಾಯಿಸುತ್ತಿರುವುದಾಗಿ ತಿಳಿದು ಬಂದಿದೆ. ಮುಖಗವಸನ್ನು ಎಲ್ಲಾ ಸಂದರ್ಭಗಳಲ್ಲಿಯೂ ಬಳಸುವುದು ಕಡ್ಡಾಯವಲ್ಲವೆಂದು ಆರೋಗ್ಯ ಇಲಾಖೆ ಹಲವಾರು ಬಾರಿ ಸ್ಪಷ್ಟ ಪಡಿಸಿದೆ.

ಕರೋನ ವೈರಾಣುವಿನ ನಿಯಂತ್ರಣದ ಆರೋಗ್ಯ ಶಿಕ್ಷಣದಿಂದ ಪ್ರಭಾವಿತರಾಗಿ ಎಲ್ಲರೂ ಮುಖಗವಸನ್ನು ಬಳಸಲು ಪ್ರಾರಂಭಿಸಿದ್ದಾರೆ. ಮುಖಗವಸು ಬಳಸುವುದರಿಂದ ಕೆಲವು ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿರುವುದು ತಜ್ಞರೊಡನೆ ಅನೌಪಚಾರಿಕ ಚರ್ಚೆಯ ವೇಳೆ ಸ್ಪಷ್ಟವಾಗಿದೆ.

ಮನೆಯಲ್ಲೆ ಮುಖಗವಸು ಮಾಡುವ ಮಾಹಿತಿ ಇಂಟರ್ ನೆಟ್ ನಲ್ಲಿ ಲಭ್ಯವಿದೆ, ಕೇಂದ್ರ ಆರೋಗ್ಯ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಸಾಮಾನ್ಯವಾಗಿ ಮನೆಯಲ್ಲೇ ಸಿದ್ದ ಪಡಿಸುವ ಮೂರು ಪದರಗಳ ಮುಖಗವಸಿನಿಂದ ಹೊಗೆ, ಧೂಳು, ಬ್ಯಾಕ್ಟಿರಿಯಾ ಮತ್ತು ವೈರಾಣುಗಳಿಂದ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು. ಆದರೆ ಬ್ಯಾಕ್ಟಿರಿಯಾ ಮತ್ತು ವೈರಾಣುಗಳಿಂದ ರಕ್ಷಣೆ ಪಡೆಯಬೇಕಾದರೆ ವೈದ್ಯಕೀಯ ದೃಢೀಕೃತ ಮುಖಗವಸುಗಳನ್ನು ಮಾತ್ರ ಬಳಸಬೇಕಿದೆ ಎಂದು ಸ್ಪಷ್ಟ ಪಡಿಸಲಾಗಿದೆ.

ಈಗಾಗಲೇ ಸಿದ್ಧ ಉಡುಪುಗಳ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ಧೂಳಿನಿಂದ ರಕ್ಷಣೆ ಪಡೆಯಲು ಮುಖಗವಸುಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ವಾಯುಮಾಲಿನ್ಯ ಇರುವ ನಗರಗಳಲ್ಲಿ, ಮುಖಗವಸು ಬಳಸುವುದರಿಂದ
ಸ್ವಲ್ಪ ಮಟ್ಟಿಗಾದ್ಧರೂ ಉಸಿರಾಟಕ್ಕೆ ಅನುಕೂಲವಾಗಿ ಶ್ವಾಸಕೋಶದ ಆರೋಗ್ಯ ಸುಧಾರಿಸಲಿದೆ ಎಂದು ಅಭಿಪ್ರಾಯ ಪಡಲಾಗಿದೆ.

ತಯಾರಿಕೆ: ಮನೆಯಲ್ಲಿ ಬಳಸದಿರುವ ಹಾಗೂ ಹರಿದಿಲ್ಲದಿರುವ ದುಪ್ಪಟ್ಟ, ಬನಿಯನ್, ಟೀ-ಶರ್ಟ್, ಕರವಸ್ತ್ರ, ಮುಂತಾದ ಶುದ್ದ ಹತ್ತಿ ಬಟ್ಟೆಗಳು ಮಾತ್ರ ಮುಖಗವಸು ತಯಾರಿಕೆಗೆ ಸೂಕ್ತವಾಗಿವೆ. ಸಿಂಥೆಟಿಕ್ ಅಥವಾ ಅರೆ ಸಿಂಥೆಟಿಕ್ ಬಟ್ಟೆಗಳಲ್ಲಿ ಮುಖಗವಸನ್ನು ಬಳಸಬಾರದು ಎಂದು ಸಲಹೆ ನೀಡಿದೆ. ದೊಡ್ಡವರು 9 X 7 ಮತ್ತು ಮಕ್ಕಳಿಗೆ 7 X 5 ಇಂಚು ಅಳತೆಯ ಮುಖಗವಸನ್ನು ಬಳಸಬಹುದಾಗಿದೆ.

ಮನೆಯಲ್ಲೇ ಇರುವ ಹೊಲಿಗೆಯಂತ್ರದಿಂದ ಅಥವಾ ಕೈ ಹೊಲಿಗೆಯಿಂದಲೂ ಇವುಗಳನ್ನು ಸಿದ್ಧಪಡಿಸಬಹುದು. ಎರಡು ಮಡಿಕೆ, ಮೂರು ನೆರಿಗೆಗಳು ಇರುವಂತೆ ಹೊಲಿಯಬೇಕು. ನಾಲ್ಕು ಮೂಲೆಗಳಿಗೂ ಕಟ್ಟಲು ಅನುಕೂಲವಾಗುವಂತೆ ದಾರಗಳನ್ನು ಜೋಡಿಸಬೇಕು.

ಅಪರಿಚಿತರೊಡನೆ ಸಂಪರ್ಕಿಸುವಾಗ, ವ್ಯಾಪರ ಮಳಿಗೆಗಳಿಗೆ ಭೇಟಿ ನೀಡುವಾಗ, ಕಛೇರಿ ಅಥವಾ ಕಾರ್ಯನಿರತ ಸ್ಥಳಗಳಲ್ಲಿ ಅಥವಾ ಕೋವಿಡ್-19ರ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತರೊಂದಿಗೆ, ಅನಿರೀಕ್ಷಿತವಾಗಿ ಅಥವಾ ಅಪೇಕ್ಷಿತವಾಗಿ ಸಂಪರ್ಕಕ್ಕೆ ಒಳಪಡುವಾಗ ಈ ಮುಖಗವಸನ್ನು ಬಳಸಬೇಕು ಎಂದು ಸಲಹೆ ನೀಡಿದೆ.

ಮನೆಯಲ್ಲಿಯೇ ಮುಖಗವಸುಗಳನ್ನು ಸಿದ್ದಪಡಿಸುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಒತ್ತಡವನ್ನು ಕಡಿಮೆ ಮಾಡಬಹುದು. ನಿಯಮಿತವಾಗಿ ಬಳಸುವುದರಿಂದ ಈಗಾಗಲೇ ತಿಳಿಸಿದ ಹಾಗೆ ಧರಿಸಿದವರಿಗೂ ಹಾಗೂ ಸಂಪರ್ಕಿತರಿಗೂ ಆರೋಗ್ಯದಲ್ಲಿ ಸುಧಾರಣೆ ಯಾಗಬಹುದು.

ಮುಖಗವಸುಗಳನ್ನು ಪ್ರತಿನಿತ್ಯ ಬಳಸಿದ ನಂತರ ಬಿಸಿ ನೀರಿನಲ್ಲಿ ತೊಳೆದು ಇಸ್ತಿ ಮಾಡಿದ ನಂತರ ಮರುಬಳಕೆ ಮಾಡಬಹುದು. ಒಬ್ಬ ವ್ಯಕ್ತಿ ಬಳಸಿದ ಮುಖಗವಸನ್ನು ಮತ್ತೊಬ್ಬರು ಬಳಸಬಾರದು. ತಪ್ಪಾಗಿ ಬಳಸಿದಾಗ ದೇಹಕ್ಕೆ ಅಗತ್ಯವಿರುವ ಶುದ್ದಗಾಳಿ ಮತ್ತು ಆಮ್ಲಜನಕದ ಕೊರತೆಯುಂಟಾಗಿ ಕೆಲವರಿಗೆ ತಲೆನೋವು ಮುಂತಾದ ಅಡ್ಡ ಪರಿಣಾಮಗಳಾಗಬಹುದು. ಮುಖಗವಸನ್ನು ತೊಳೆಯದ ಕೈನಿಂದ ಯಾವುದೇ ಕಾರಣಕ್ಕೂ

ಮುಟ್ಟಬಾರದು. ಬಳಸುತ್ತಿರುವ ಮುಖಗವಸಿನ ಒಳಪದರ ಹಾಗೂ ಮೇಲ್ಪದರಗಳನ್ನು ಅದಲು ಬದಲು ಮಾಡಿ ಧರಿಸುವಂತಿಲ್ಲ. ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin