ಕೊರೋನಾ ವಿಷಯದಲ್ಲಿ ಚೀನಾವನ್ನೇ ಮೀರಿಸಲಿದೆಯೇ ಮಹಾರಾಷ್ಟ್ರ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.9-ದೇಶದಲ್ಲೇ ಅತ್ಯಧಿಕ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಮತ್ತು ಮರಣಗಳು ಉಲ್ಬಣಗೊಳ್ಳುತ್ತಿದೆ.

ಸೋಂಕು ಪ್ರಕರಣದಲ್ಲಿ ಈಗಾಗಲೇ ಕೊರೊನಾ ಉಗಮ ದೇಶ ಚೀನಾವನ್ನು ಮಹಾರಾಷ್ಟ್ರ ಹಿಂದಿಕ್ಕಿದೆ. ರಾಜ್ಯದಲ್ಲಿ ಇಂದು ಬೆಳಗಿನ ವರದಿ ಪ್ರಕಾರ 88,528 ಮಂದಿ ರೋಗ ಪೀಡಿತರಾಗಿದ್ದಾರೆ.

ಚೀನಾದಲ್ಲಿ ಈವರೆಗೆ ದಾಖಲಾಗಿರುವ ಸೋಂಕು ಪ್ರಮಾಣ 83,040. ಭಾರತದ ರಾಜ್ಯವೊಂದು ಇಡೀ ಚೀನಾದ ಪಾಸಿಟಿವ್ ಪ್ರಕರಣವನ್ನು ಹಿಂದಿಕ್ಕಿರುವುದು ಆತಂಕದ ಸಂಗತಿಯಾಗಿದೆ. ಅಲ್ಲದೆ, ಪರಿಸ್ಥಿತಿ ಇದೇ ರೀತಿ ಮುಂದುವರಿಸಿದರೆ ಸಾವಿನ ಸಂಖ್ಯೆಯಲ್ಲಿಯೂ ಮಹಾರಾಷ್ಟ್ರ ಚೀನಾವನ್ನು ಹಿಂದಿಕ್ಕಲ್ಲಿದೆ.

ಚೀನಾದಲ್ಲಿ ಈವರೆಗೆ 4,634 ರೋಗಿಗಳು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 3,169ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಪ್ರತಿದಿನ ಸರಾಸರಿ 100 ಮಂದಿಯನ್ನು ಕೊರೊನಾ ಬಲಿ ತೆಗೆದುಕೊಳ್ಳುತ್ತಿದ್ದು, ಇನ್ನು 15 ದಿನಗಳಲ್ಲಿ ಚೀನಾವನ್ನು ಮೀರಿಸಲಿದೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲವೇ ವಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ಮೀರುವ ಅಪಾಯವೂ ಇದೆ.

ಮಹಾರಾಷ್ಟ್ರ ನಂ.1: ಈವರೆಗೆ ಸಂಭವಿಸಿರುವ 7,466 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದ್ದು, ಅಲ್ಲಿ ಈವರೆಗೆ 3,169 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಎರಡನೆ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,280 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (874), ಮಧ್ಯಪ್ರದೇಶ (414), ಪಶ್ಚಿಮ ಬಂಗಾಳ (405), ತಮಿಳುನಾಡು (286), ಉತ್ತರಪ್ರದೇಶ (283), ರಾಜಸ್ಥಾನ (246), ತೆಲಂಗಾಣ (137), ಆಂಧ್ರಪ್ರದೇಶ (75), ಕರ್ನಾಟಕ(64), ಹಾಗೂ ಪಂಜಾಬ್ (53) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 46, ಹರಿಯಾಣ 39, ಬಿಹಾರ 31, ಹರಿಯಾಣ 28, ಕೇರಳ 16, ಉತ್ತರಾಖಂಡ 13, ಒಡಿಶಾ 9, ಜಾರ್ಖಂಡ್ 7, ಹಿಮಾಚಲ ಪ್ರದೇಶ ಮತ್ತು ಚಂಡೀಗಢ ತಲಾ 5, ಅಸ್ಸಾಂ ಮತ್ತು ಛತ್ತೀಸ್‍ಗಢ ತಲಾ 4 ಹಾಗೂ ಪುದುಚೇರಿ, ಲಡಾಕ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

Facebook Comments