ಕೊರೊನಾ ಕಂಟಕ : 30 ರಾಜ್ಯ, 606 ಜಿಲ್ಲೆ ಲಾಕ್‍ಡೌನ್, 10ಕ್ಕೇರಿದ ಸಾವಿನ ಸಂಖ್ಯೆ, 500 ಜನರಲ್ಲಿ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮಾ.24-ಭಾರತದಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಕೊರೊನಾ ವೈರಾಣು ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ 10 ಮಂದಿ ಬಲಿಯಾಗಿದ್ದು, ಸುಮಾರು 500 ಜನರು ಬಾಧಿತರಾಗಿರುವುದು ದೃಢಪಟ್ಟಿದೆ.

ಕೊರೊನಾ ಸೋಂಕು ಹಬ್ಬುವ ಭೀತಿಯಿಂದಾಗಿ ದೇಶದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 606 ಜಿಲ್ಲೆಗಳು ಲಾಕ್‍ಡೌನ್ ಆಗಿದ್ದು, ಜನಜೀವನ ಆಯೋಮಯವಾಗಿದೆ. ಮಹಾಮಾರಿ ಕೋವಿಡ್-19ಕ್ಕೆ ನಿನ್ನೆ ಒಂದೇ ದಿನ ಮೂವರು ಬಲಿಯಾಗಿದ್ದು, ಸತ್ತವರ ಸಂಖ್ಯೆ 10ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಮೆರಿಕದಿಂದ ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದ 69 ವರ್ಷದ ವೃದ್ಧರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಮೃತಪಟ್ಟರು. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕಿಗೆ ಇನ್ನಿಬ್ಬರು ನಿನ್ನೆ ಬಲಿಯಾದರು. ನಿನ್ನೆ ಒಂದೇ ದಿನ ಮೂವರು ಸಾವಿಗೀಡಾಗುವುದರೊಂದಿಗೆ ದೇಶದಲ್ಲಿ ಸತ್ತವರ ಸಂಖ್ಯೆ 10ಕ್ಕೇರಿದೆ.

500 ಮಂದಿ ಸೋಂಕು ಪೀಡಿತರಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಸೋಂಕು ಪೀಡಿತರಿರುವ ಮಹಾರಾಷ್ಟ್ರದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 100 ದಾಟಿದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಒಟ್ಟು 18 ಹೊಸ ಪ್ರಕರಣಗಳು ಪತ್ತೆಯಾಗಿವೆ.

ವಿವಿಧ ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ ಏರುತ್ತಲೇ ಇದೆ. ತುಸು ಸಮಾಧಾನಕರ ಸಂಗತಿ ಎಂದರೆ ರೋಗ ಪೀಡಿತರದಲ್ಲಿ 38 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾ ಕಾಟ ತೀವ್ರಗೊಂಡಿರುವುದರಿಂದ ಇಡೀ ಭಾರತವೇ ಕಫ್ರ್ಯೂ ಮಾದರಿಯ ನಿರ್ಬಂಧಕ್ಕೆ ಒಳಗಾಗಿವೆ. 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 606 ಜಿಲ್ಲೆಗಳು ಲಾಕ್‍ಡೌನ್ ಆಗಿದ್ದು, ಮಾರ್ಚ್ 31ರವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ.

Facebook Comments

Sri Raghav

Admin