ಸುಮಾರು 7500ದಷ್ಟು ಸೋಂಕಿತರು ನಾಪತ್ತೆ, ಬೆಂಗಳೂರಲ್ಲಿ ಹೆಚ್ಚಿದ ಕೊರೋನಾ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.16- ನಾಗರಿಕರೇ ಎಚ್ಚರ.. ನಾಪತ್ತೆಯಾಗಿರುವ ಸಾವಿರಾರು ಕೊರೊನಾ ಸೋಂಕಿತರು ನಮ್ಮ ಮಧ್ಯೆಯೇ ಇದ್ದಾರೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ದಿನೇ ದಿನೇ ಪ್ರಕರಣಗಳು ಏರುತ್ತಿರುವುದಕ್ಕೆ ಇವರೇ ಕಾರಣರಾಗಿದ್ದಾರೆ.

ನಗರದಲ್ಲಿ ಸರಿ ಸುಮಾರು 7500ದಷ್ಟು ಸೋಂಕಿತರು ನಾಪತ್ತೆಯಾಗಿರುವುದು ಬಿಬಿಎಂಪಿಗೆ ಈಗ ಹೊಸ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಬೆಂಗಳೂರು ವಾಸಿಗಳಲ್ಲಿ ಆತಂಕ ಮೂಡಿಸಿದೆ.ಆರ್ಥಿಕ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‍ಡೌನ್ ತೆರವುಗೊಳಿಸಿ ಕೊರೊನಾದೊಂದಿಗೆ ಬದುಕಬೇಕೆಂದು ಜನರಿಗೆ ಹಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಸಿತ್ತು.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸೋಂಕು ಪತ್ತೆ ಮಾಡಲು ಬಿಬಿಎಂಪಿ ಮುಂದಾಗಿದ್ದು, ನಗರದಲ್ಲಿ ಪ್ರತಿದಿನ 40 ಸಾವಿರದಷ್ಟು ಜನರ ಸೋಂಕು ಪತ್ತೆ ಪರೀಕ್ಷೆ ಮಾಡುತ್ತಿತ್ತು.ಕಳೆದ ಒಂದು ವಾರದಿಂದ ಸುಮಾರು 7630 ಮಂದಿ ಸೋಂಕಿತರು ನಾಪತ್ತೆಯಾಗಿರುವುದು ಬಿಬಿಎಂಪಿಗೆ ಈಗ ತಲೆನೋವಾಗಿ ಪರಿಣಮಿಸಿದೆ.

ಸೋಂಕು ನಿಯಂತ್ರಣಕ್ಕೆ ಅಡಚಣೆಯಾಗಿದೆ. ಈ ಸೋಂಕಿತರು ಈಗ ಕೊರೊನಾ ಸೋಂಕು ವಾಹಕರಾಗಿದ್ದಾರೆ. ಜನಸಾಮಾನ್ಯರು ಕೊರೊನಾದೊಂದಿಗೆ ಬದುಕಲು ಮಾಸ್ಕ್, ಸ್ಯಾನಿಟೈಸ್ ಬಳಕೆ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದಾರೆ.

ತಪ್ಪು ಮೊಬೈಲ್ ನಂಬರ್ ನೀಡಿ ನಾಪತ್ತೆಯಾಗಿರುವ ಸೋಂಕಿತರು ಸಾರ್ವಜನಿಕರ ಮಧ್ಯೆ ಓಡಾಡಿಕೊಂಡು ಇತರರಿಗೆ ಸೋಂಕು ಹರಡುವ ವಾಹಕರಾಗಿದ್ದಾರೆ.ಬಿಬಿಎಂಪಿಯೇ ನೀಡಿರುವ ವರದಿ ಪ್ರಕಾರ 7630 ಮಂದಿ ಎಂಟು ವಲಯಗಳಿಂದ ನಾಪತ್ತೆಯಾಗಿದ್ದು, ಇವರನ್ನು ಹುಡುಕಲು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಪೊಲೀಸರಿಂದಲೂ ಕೂಡ ಇವರನ್ನು ಪತ್ತೆ ಮಾಡಲು ಸಾದ್ಯವಾಗುತ್ತಿಲ್ಲ.

ಇವರಿಂದ ಇನ್ನೆಷ್ಟು ಜನಕ್ಕೆ ಸೋಂಕು ಹರಡಿದೆಯೋ ಗೊತ್ತಿಲ್ಲ. ಸೋಂಕಿತರು ಹಾಗೂ ಅವರ ಸಂಪರ್ಕಿತರ ಪತ್ತೆ ಕಾರ್ಯ ಮಾಡಲು ಬಿಬಿಎಂಪಿ ಅಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಸೋಂಕಿತರು ಎರಡು ವಾರ ಕಾಲ ಚಿಕಿತ್ಸೆ ಪಡೆದು ಸೋಂಕಿನಿಂದ ಮುಕ್ತರಾಗಲು ಸರ್ಕಾರ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಆದರೆ ಅನಗತ್ಯವಾಗಿ ಈ ರೀತಿ ತಪ್ಪು ವಿಳಾಸ ನೀಡಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿರುವವರಿಂದ ಸೋಂಕು ಮತ್ತುಷ್ಟು ವ್ಯಾಪಿಸುತ್ತಿದೆ.

ಇದೇ ಕಾರಣಕ್ಕಾಗಿ ನಗರದಲ್ಲಿ ಸೋಂಕು ನಿಯಂತ್ರಣಕ್ಕೂ ಕೂಡ ಬರುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದೆ. ನಗರದಲ್ಲೂ ಕೂಡ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಾವಿನ ಪ್ರಮಾಣವೂ ಕೂಡ ಏರುತ್ತಲೇ ಇದೆ. ಸ್ವಯಂ ಜಾಗೃತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದೇ ಕೊರೊನಾಕ್ಕೆ ರಾಮಬಾಣ.

ಈ ರೀತಿ ತಪ್ಪಿಸಿಕೊಂಡು ಓಡಾಡುವುದರಿಂದ ಸೋಂಕು ವ್ಯಾಪಿಸಬಹುದು ಹೊರತು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನನಗೇನೂ ಆಗುವುದಿಲ್ಲ. ನನಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಬಂದಿದೆ ಎಂಬ ನಿರ್ಲಕ್ಷ್ಯ ಧೋರಣೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ತಪ್ಪಿಸಿಕೊಂಡು ಓಡಾಡುವುದರಿಂದ ಆಪತ್ತು ಕಟ್ಟಿಟ್ಟ ಬುತ್ತಿ.

ತಮ್ಮ ಪ್ರಾಣಕ್ಕೆ ಕುತ್ತು ತರುವುದಲ್ಲದೇ ಬೇರೆಯವರ ಪ್ರಾಣವನ್ನೂ ಬಲಿ ತೆಗೆದುಕೊಳ್ಳುತ್ತದೆ. ತಮ್ಮ ಕುಟುಂಬದವರನ್ನು ಆಹುತಿ ಪಡೆಯುತ್ತದೆ. ನಾಪತ್ತೆಯಾದ ಸೋಂಕಿತರಿಂದ ಸೋಂಕು ಮತ್ತಷ್ಟು ಉಲ್ಭಣಗೊಳ್ಳುತ್ತದೆ. ಸ್ವಯಂ ಪ್ರೇರಿತರಾಗಿ ಬಂದು ಚಿಕಿತ್ಸೆ ಪಡೆಯುವುದು ಸೂಕ್ತ.

ಇಲ್ಲದಿದ್ದರೆ ತಾವೂ ಬಲಿಯಾಗುವುದರ ಜೊತೆಗೆ ಸಮಾಜವೂ ಬಲಿಯಾಗುತ್ತದೆ. ಇವರನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸಿದರೆ ಮಹಾಮಾರಿ ಕೊರೊನಾವನ್ನು ಸಾಕಷ್ಟು ನಿಯಂತ್ರಿಸಬಹುದಾಗಿದೆ.

Facebook Comments

Sri Raghav

Admin