ಜನಪ್ರತಿನಿಧಿಗಳನ್ನು ಬೆಂಬಿಡದೆ ಕಾಡುತ್ತಿದೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಒಂದೆಡೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಜನಪ್ರತಿನಿಧಿಗಳಿಗೂ ಕೂಡ ಹಬ್ಬುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಕಲಬುರಗಿ ಜಿಲ್ಲೆ ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜ್‍ಕುಮಾರ್ ಪಾಟೀಲ್ ತೇಲ್ಕಕರ್‍ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜೊತೆಗೆ ಶಾಸಕರ ಪತ್ನಿ ಹಾಗೂ ಅವರ ಪುತ್ರಿಗೂ ಸೋಂಕು ಕಾಣಿಸಿಕೊಂಡಿದೆ.

ಮೂರು ದಿನದ ಹಿಂದೆ ಶಾಸಕರ ಆಪ್ತ ಸಹಾಯಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರ ಜೊತೆ ಸಂಪರ್ಕದಲ್ಲಿದ್ದ ಕಾರಣ ರಾಜ್‍ಕುಮಾರ್ ಫಾಟೀಲ್ ತೇಲ್ಕಕರ್ ಅವರ ಕುಟುಂಬದ  ಸದಸ್ಯರ ಗಂಟಲು ದ್ರವವನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು.

ಇಂದು ವರದಿ ಬಂದಿದ್ದು, ಶಾಸಕರು ಅವರ ಪತ್ನಿ ಮತ್ತು ಪುತ್ರಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಇದೀಗ ಮೂವರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು ಆರು ಮಂದಿ ಶಾಸಕರಿಗೆ ಕೊರೊನಾ ಕಾಣಿಸಿಕೊಂಡಿದೆ.

ಈಗಾಗಲೇ ಶಾಸಕರಾದ ಕುಣಿಗಲ್‍ನ ಡಾ.ರಂಗನಾಥ್, ಶೃಂಗೇರಿಯ ಡಿ.ಟಿ.ರಾಜೇಗೌಡ, ಮಂಗಳೂರಿನ ಭರತ್ ಶೆಟ್ಟಿ, ಜೆಡಿಎಸ್‍ನ ಮೇಲ್ಮನೆ ಸದಸ್ಯ ಭೋಜೆಗೌಡ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಮೇಲ್ಮನೆ ಸದಸ್ಯ ಎಂ.ಕೆ.ಪ್ರಾಣೇಶ್ ಅವರಿಗೂ ಸೋಂಕು ಕಾಣಿಸಿಕೊಂಡಿದೆ.

ನಿನ್ನೆಯಷ್ಟೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಖಚಿತಪಟ್ಟಿತ್ತು. ಹೀಗೆ ದಿನದಿಂದ ದಿನಕ್ಕೆ ಜನಪ್ರತಿನಿಧಿಗಳಲ್ಲೂ ಮಹಾಮಾರಿ ಹಬ್ಬುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

Facebook Comments