ಕಿಲ್ಲರ್ ಕೊರೋನಾಗೆ ಮತ್ತೊಬ್ಬ ಎಎಸ್‍ಐ ಬಲಿ, 41 ಪೊಲೀಸರಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.21- ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.  ಬೆಂಗಳೂರಿನ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕೆಲಸ ನಿರ್ವಹಿಸುತ್ತಿದ್ದ 59 ವರ್ಷದ ಅಧಿಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಲಕ್ಷಣಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವಾಗ ಕೊರೊನಾ ಸೋಂಕಿರುವುದು ಶುಕ್ರವಾರ ಖಚಿತವಾಗಿತ್ತು. ಅಂದಿನಿಂದ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಬೆಂಗಳೂರು ನಗರ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಈ ವರ್ಷಾಂತ್ಯದ ಡಿಸೆಂಬರ್‍ಗೆ ನಿವೃತ್ತರಾಗಬೇಕಿತ್ತು. ಎಎಸ್‍ಐ ಅವರ  ಸಾವಿಗೆ ಹಿರಿಯ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.

ಈವರೆಗೂ ಮೂರು ಜನ ಪೊಲೀಸರು ಕೊರೊನಾದಿಂದಾಗಿ ಸಾವನ್ನಪ್ಪಿದಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸಂಚಾರಿ ವಿಭಾಗದ ಎಎಸ್‍ಐ ಒಬ್ಬರು ಸಾವನ್ನಪ್ಪಿದ್ದರು. ನಿನ್ನೆ ಹೆಡ್‍ಕಾನ್ಸ್‍ಟೆಬಲ್ ಮೃತಪಟ್ಟಿದ್ದರು.

# ಕಲಾಸಿಪಾಳ್ಯ ಠಾಣೆಯ 23 ಪೊಲೀಸರಿಗೆ ಕೋವಿಡ್
ಬೆಂಗಳೂರು, ಜೂ.21- ಬೆಂಗಳೂರು ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಟ್ಟು 23 ಸಿಬ್ಬಂದಿಗೆ ಕೊರೊನಾ ಸೋಂಕು ಕಂಡುಬಂದಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮೊದಲು ಎಂಟು ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.

ಆನಂತರ ಠಾಣೆಯ ಇತರೆ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಇನ್ನೂ 15 ಮಂದಿಗೆ ಸೋಂಕು ಇರುವುದು ಕಂಡುಬಂದಿದೆ ಎಂದು ತಿಳಿಸಿದರು. ಈಗ ಕಲಾಸಿಪಾಳ್ಯ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದ್ದು, ಸೋಂಕಿತ ಸಿಬ್ಬಂದಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

# ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ  18 ಪೊಲೀಸರಿಗೆ ಕೊರೊನಾ
ಬೆಂಗಳೂರು, ಜೂ.21- ಬೆಂಗಳೂರು ನಗರ ಸಂಚಾರಿ ವಿಭಾಗದಲ್ಲಿ ಕೆಲಸ ಮಾಡುವ 18 ಮಂದಿ ಪೊಲೀಸರಿಗೆ ಕೊರೊನಾ ತಗುಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರಿ) ರವಿಕಾಂತೇಗೌಡ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬೆಂಗಳೂರು ಪೊಲೀಸರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಜನರ ನಡುವೆ ಕೆಲಸ ಮಾಡುವ ಸಂದರ್ಭದಲ್ಲಿ ಸೋಂಕು ವ್ಯಾಪಿಸುತ್ತಿದೆ.

ಎಲ್ಲರಿಗೂ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಗರ ಸಂಚಾರಿ ಪೊಲೀಸ್ ವಿಭಾಗದಲ್ಲಿ ಈವರೆಗೂ ಇಬ್ಬರು ಎಎಸ್‍ಐ ಅವರುಗಳು ಸಾವನ್ನಪ್ಪಿದ್ದಾರೆ. ಒಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದ 15 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ

Facebook Comments