ಕಳೆದ 16 ದಿನಗಳಿಂದ ಕ್ವಾರೆಂಟೇನ್‍ನಲ್ಲಿದ್ದ 46 ಮಂದಿ ಇಂದು ಮನೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ. 5-ಕೊರೋನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ನಗರದ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಳೆದ 16 ದಿನಗಳ ಕಾಲ ಕ್ವಾರೆಂಟೇನ್‍ನಲ್ಲಿದ್ದ ದೇಶ, ವಿದೇಶಗಳ 46 ಪ್ರಯಾಣಿಕರು ಇಂದು ನಿರಮ್ಮಳವಾಗಿ ತಮ್ಮ ಮನೆಗಳಿಗೆ ತೆರಳಿದರು.

ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ ಸೇರಿ ಆರು ದೇಶಗಳಿಂದ ಬಂದಿದ್ದ ಪ್ರಯಾಣಿಕರು ಬೆಂಗಳೂರಿನ ಜಿಲ್ಲಾಡಳಿತದ ಸಹಯೋಗದೊಂದಿಗೆ ಕ್ವಾರೆಂಟೇನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಕೋವಿಡ್ 19 ಸೋಂಕು ವ್ಯಾಪಿಸಿರಬಹುದು ಎಂಬ ಶಂಕೆಯಿಂದ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯಕೀಯ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಈ ಪ್ರಯಾಣಿಕರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿ, ಆರೈಕೆ ಮಾಡಿತ್ತು.
ಮುಗುಳ್ನಗೆಯೊಂದಿಗೆ ಈ ಎಲ್ಲರನ್ನು ಇಂದು ಬೀಳ್ಕೊಟ್ಟಿತು. ತಮಗೆ ನೀಡಿದ ಉತ್ತಮ ಚಿಕಿತ್ಸೆಯಿಂದ ಸಂತಸಗೊಂಡ ಈ ಎಲ್ಲರೂ ಆಸ್ಪತ್ರೆಯ ವೈದ್ಯರಿಗೆ ಹೂಗುಚ್ಚ ನೀಡಿ ಸಂತಸ ವ್ಯಕ್ತಪಡಿಸಿದರು.

ಈ ಅವಧಿಯಲ್ಲಿ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ, ತಾಲ್ಲೂಕು ಆರೋಗ್ಯಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿಯ ಜತೆ ಉತ್ತಮ ಸಮನ್ವಯತೆಯಿಂದ ಕೆಲಸ ಮಾಡಿದ್ದರು. ಪ್ರಮುಖವಾಗಿ ಸಪ್ತಗಿರಿ ಆಸ್ಪತ್ರೆಯ ಮಾನಸಿಕ ತಜ್ಞರಾದ ಶೋಯಿಬ್ ಮತ್ತು ಸಂತೋಷ್ ಉನ್ನಿ ಹದಿನಾಲ್ಕು ದಿನಗಳ ಯಾತ್ರೆಯಲ್ಲಿ ಈ ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಕೌನ್ಸಿಲಿಂಗ್ ಮಾಡಿ ಆತ್ಮ ಸ್ಥೈರ್ಯ ತುಂಬಿದರು.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇವರೆಲ್ಲರೂ ಆಸ್ಪತ್ರೆ ಸೇರಿದಾಗ ಇವರಿಗೆ ಸಣ್ಣ ಪ್ರಮಾಣದಲ್ಲಿ ಶೀತ, ಜ್ವರ ಇತ್ತು. ಎಲ್ಲರ ಗಂಟಲು ಮಾದರಿ ಪರೀಕ್ಷೆ ವರದಿಗಳು ನೆಗೆಟೀವ್ ಬಂದಿವೆ. ಈ ಎಲ್ಲರನ್ನೂ ವಿಶೇಷ ಐಸೋಲೇಷನ್ ವಾರ್ಡ್‍ಗೆ ದಾಖಲಿಸಲಾಗಿತ್ತು.

ಈ ಪ್ರಯಾಣಿಕರ ಸಂಬಂಧಿಕರಿಗೆ ಪ್ರತಿ ಹಂತದಲ್ಲೂ ಸೂಕ್ತ ಮಾಹಿತಿ ಒದಗಿಸಲಾಗುತ್ತಿತ್ತು. ಜತೆಗೆ ಈ ಎಲ್ಲರಿಗೂ ಅವರ ಅಭಿರುಚಿಗಳಿಗೆ ತಕ್ಕಂತೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ದೂರವಾಣಿ, ಅಂತಜರ್ ಲದ ಸೌಲಭ್ಯ, ವಿವಿಧ ಆಟೋಟಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಲಾಕ್ ಡೌನ್ ಮಾರ್ಗಸೂಚಿಗಳನ್ವಯ ಇವರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಇವರೆಲ್ಲರೂ ಆಸ್ಪತ್ರೆಯಿಂದ ಮುಗುಳ್ನಗೆಯಿಂದ ನಿರ್ಗಮಿಸಿದ್ದಾರೆ.

Facebook Comments

Sri Raghav

Admin