ಭಾರತದಲ್ಲಿ ಕೊರೋನಾ ಹೊಸ ದಾಖಲೆ, 24 ಗಂಟೆಯಲ್ಲಿ 41 ಸಾವಿರ ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.20-ಭಾರತದಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನೇ ದಿನೇ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಇದುವರೆಗಿನ ಎಲ್ಲಾ ದಾಖಲೆಗಳನ್ನೂ ಮುರಿದು 41 ಸಾವಿರ ಮಂದಿಗೆ ಸೋಂಕು ತಗುಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಇಂದು ಬೆಳಗ್ಗೆ 8 ಗಂಟೆ ವೇಳೆಗೆ 40,425 ಜನರು ಕೋವಿಡ್ ಪೀಡಿತರಾಗಿದ್ದು, 681 ಮಂದಿ ಕೊನೆಯುಸಿರೆಳೆದಿದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಕೋವಿಡ್ ಸಂಖ್ಯೆ 11,18,043ಕ್ಕೆ ಏರಿಕೆಯಾಗಿದೆ.

ಚೇತರಿಕೆ ಪ್ರಮಾಣವೂ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಸಕ್ರಿಯ ಸೋಂಕು ಪೀಡಿತರು ಕೂಡ 4 ಲಕ್ಷ ಗಡಿಗೆ ಬಂದಿರುವುದು ಆತಂಕ ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಪ್ರತಿದಿನ 10 ರಿಂದ 20 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.

ದೆಹಲಿ, ಗುಜರಾತ್, ರಾಜಸ್ತಾನ, ಕೋಲ್ಕತ್ತಾದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಚಿಂತೆಗೀಡುಮಾಡಿದೆ.

ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಮೂರು ದಿನಗಳಲ್ಲಿ ಒಂದು ಲಕ್ಷ ಸೋಂಕಿತರು ದೇಶದಲ್ಲಿ ಕಂಡುಬಂದಿದ್ದಾರೆ. ಇದರಲ್ಲಿ ವಿದೇಶಿಯರು ಕೂಡ ಇದ್ದಾರೆ ಎಂದು ತಿಳಿಸಲಾಗಿದೆ.

Facebook Comments

Sri Raghav

Admin