ಬೆಂಗಳೂರನ್ನು ಆವರಿಸಿದ ಕೊರೋನಾ, ಯಾವ ಏರಿಯಾನೂ ಸೇಫ್ ಅಲ್ಲ..!
ಬೆಂಗಳೂರು, ಜೂ.19- ನಗರದ ಮೂಲೆ ಮೂಲೆಗೂ ಕೊರೊನಾ ಸೋಂಕು ಹರಡುತ್ತಿದ್ದು, ದಿನೇ ದಿನೇ ಸಾವನ್ನಪ್ಪುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದ್ದು, ನಿನ್ನೆಯವರೆಗೂ 51 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇಂದು ಮತ್ತೆ ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಜೆಪಿ ನಗರದಲ್ಲಿ ರಾತ್ರಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ವ್ಯಕ್ತಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಶಾಮಣ್ಣ ಗಾರ್ಡನ್ನಲ್ಲಿ ಒಬ್ಬರು, ಕತ್ರಿಗುಪ್ಪೆಯಲ್ಲಿ ಒಬ್ಬರು, ಸೋಮೇಶ್ವರದಲ್ಲಿ ಒಬ್ಬರು, ವಿದ್ಯಾಪೀಠದಲ್ಲಿ ಒಬ್ಬರು ಸೋಂಕಿಗೆ ಬಲಿಯಾಗುವ ಮೂಲಕ ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 114 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರೆ, ಇವರಲ್ಲಿ 56 ಮಂದಿ ಬೆಂಗಳೂರಿನವರೇ ಆಗಿರುವುದು ಆತಂಕದ ಸಂಗತಿ.
ಕಳೆದ ಒಂದು ವಾರದ ಹಿಂದೆ ನಗರದಲ್ಲಿ ಕೇವಲ 29 ಮಂದಿ ಸಾವನ್ನಪ್ಪಿದ್ದರು. ದಿನೇ ದಿನೇ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದುವರೆಗೂ 56 ಮಂದಿ ಸಾವನ್ನಪ್ಪಿದ್ದು, ಇನ್ನೂ ಕೆಲವು ಸೋಂಕಿತರು ಜೀವ ಕಳೆದುಕೊಳ್ಳುವ ಅಪಾಯ ಎದುರಾಗಿದೆ.
ಜೂ.12ರಂದು ಮೂರು, 13ರಂದು ಮೂರು, 14ರಂದು ಇಬ್ಬರು, 15ರಂದು ಆರು ಮಂದಿ, 16ರಂದು ಐದು, 17ರಂದು ಒಬ್ಬರು ಹಾಗೂ 18ರಂದು ಬರೋಬ್ಬರಿ ಎಂಟು ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರೆ, ಇಂದು ಮತ್ತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಹೆಚ್ಚಾದ ಆತಂಕ: ನಗರದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ. ಅದರಲ್ಲೂ ಮೂರು ವಲಯಗಳಂತೂ ಕೊರೊನಾ ಹಾಟ್ಸ್ಪಾಟ್ಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ನಗರದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳು ಕೊರೊನಾ ಹಾಟ್ಸ್ಪಾಟ್ಗಳಾಗಿ ಪರಿವರ್ತನೆಗೊಂಡಿದ್ದು, ಈ ಮೂರೂ ಝೋನ್ಗಳಲ್ಲಿ ಸೋಂಕಿತರು ಹಾಗೂ ಸೋಂಕಿನಿಂದ ಸಾವನ್ನಪ್ಪುತ್ತಿರುವವರೇ ಹೆಚ್ಚು ಮಂದಿ ಇದ್ದಾರೆ.
ಪೂರ್ವ ವಲಯ ಒಂದರಲ್ಲೇ 159 ಕೊರೊನಾ ಸೋಂಕಿತರಿದ್ದರೆ ಇದುವರೆಗೂ 13 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ನಾಗಾವರ, ಎಸ್ಕೆ ಗಾರ್ಡನ್, ಅಗರ, ಸಂಪಂಗಿ ರಾಮನಗರ ಸೇರಿದಂತೆ ಹತ್ತಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್ಗಳು ಇದೇ ವಲಯದಲ್ಲಿರುವುದು ವಿಶೇಷ.
ಇನ್ನು ಪಶ್ಚಿಮ ವಲಯದಲ್ಲಿ 144 ಕೊರೊನಾ ಸೋಂಕಿತರಿದ್ದರೆ ಮಹಾಮಾರಿಯಿಂದ 11 ಮಂದಿ ಮೃತಪಟ್ಟಿದ್ದಾರೆ.ಪಾದರಾಯನಪುರ, ಮಲ್ಲೇಶ್ವರಂ, ಅಗ್ರಹಾರ ದಾಸರಹಳ್ಳಿ ಸೇರಿದಂತೆ ಈ ವಲಯದಲ್ಲಿ 16ಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್ಗಳಿವೆ.
ಇನ್ನು ದಕ್ಷಿಣ ವಲಯದಲ್ಲಿ 16 ಮಂದಿ ಕೊರೊನಾ ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದರೆ, ಈ ವಲಯದಲ್ಲೂ 25ಕ್ಕೂ ಹೆಚ್ಚು ಕಂಟೈನ್ಮೆಂಟ್ ಏರಿಯಾಗಳಿರುವುದು ವಿಶೇಷ. ಹೀಗಾಗಿ ಇನ್ನು ಮುಂದಾದರೂ ಈ ಮೂರು ವಲಯಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕಾದ್ದು ಅನಿವಾರ್ಯ.
ಎಲ್ಲೆಂದರಲ್ಲಿ ಓಡಾಡುವುದನ್ನು ನಿಲ್ಲಿಸಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ಎಚ್ಚರಿಕೆ ವಹಿಸದಿದ್ದರೆ ಮಹಾಮಾರಿ ನಿಮ್ಮ ಮನೆ ಬಾಗಿಲಿಗೆ ಬರುವುದು ಗ್ಯಾರಂಟಿ.
ರಾಜಧಾನಿಯಲ್ಲಿ ಸಾವಿನ ಪ್ರಮಾಣ ಶೇ.6ಕ್ಕೆ ಏರಿಕೆ: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.6.04ಕ್ಕೆ ಏರಿಕೆಯಾಗಿದೆ. ಒಟ್ಟು 804 ಜನ ಸೋಂಕಿತರಲ್ಲಿ ಶೇ.48.34ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 45.49 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಏರಿಕೆ ಪ್ರಮಾಣಕ್ಕಿಂತ ಗುಣಮುಖರ ಪ್ರಮಾಣ ಹೆಚ್ಚಿದೆ. ಆದರೆ, ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕೆಮ್ಮು, ನೆಗಡಿ, ಶೀತ ಜ್ವರದ ಐಎಲ್ಐ ಸೋಂಕಿನ ಲಕ್ಷಣಗಳು ಹಾಗೂ ತೀವ್ರ ಉಸಿರಾಟದ ತೊಂದರೆ ಇರುವವರು ಸೋಂಕಿಗೆ ಒಳಗಾಗುತ್ತಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಕಡಿಮೆಯಾಗುತ್ತಿದೆ.
ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ವೃದ್ಧರು, ಮಕ್ಕಳು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಹಾನಿಯಾಗಲಿದೆ. ಪ್ರಸ್ತುತ ನಗರದಲ್ಲಿ 33 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಕೂಡ ಎದುರಾಗಿದೆ.