ಸೌದಿ ರಾಜಮನೆತನದ 150 ಮಂದಿಗೆ ಕೊರೋನಾ ತಗುಲಿರುವುದು ಕನ್ಫರ್ಮ್..!

ಈ ಸುದ್ದಿಯನ್ನು ಶೇರ್ ಮಾಡಿ

ರಿಯಾದ್,ಏ.13- ಜಗತ್ತಿನ ತೈಲ ಸಮೃದ್ಧ ರಾಷ್ಟ್ರ ಸೌದಿ ಅರೇಬಿಯಾ ಅಗೋಚರ ವೈರಾಣು ದಾಳಿಯಿಂದ ಅಕ್ಷರಶಃ ನಲುಗಿಹೋಗಿದೆ. ಮತ್ತೊಂದೆಡೆ ಸೌದಿ ಅರೇಬಿಯಾದ 150ಕ್ಕೂ ಹೆಚ್ಚು ರಾಜಪರಿವಾರದವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ದೊರೆ ಸಲ್ಮಾನ್ ಮತ್ತು ರಾಜಕುಮಾರ ಮಹಮ್ಮದ್ ಸಲ್ಮಾನ್ ಸೇರಿದಂತೆ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಐಸೊಲೇಷನ್‍ನಲ್ಲಿರಿಸಿ ತೀವ್ರ ನಿಗಾ ವಹಿಸಿದೆ.

ದೊರೆ ಸಲ್ಮಾನ್‍ರ ನಿಕಟ ಸಂಬಂಧಿ ಮತ್ತು ರಿಯಾದ್ ಸರ್ಕಾರದ ಮುಖ್ಯಸ್ಥರಾದ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲ್ ಜೀಜ್ ಅವರಿಗೆ ಸೋಂಕು ದೃಢಪಟ್ಟಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಇವರಲ್ಲದೆ ಸರ್ಕಾರದ ಮಂತ್ರಿ ಮಹೋದಯರು ಮತ್ತು ಉನ್ನತ ಅಧಿಕಾರಿಗಳು ಮತ್ತು ರಾಜಪರಿವಾರದ ಅನೇಕರಿಗೂ ಸೋಂಕು ತಗುಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ತೈಲ ಸಾಮ್ರಾಟರಿಗೆ ಸೋಂಕು ತಗುಲಿರುವುದರಿಂದ ಸೌದಿ ಅರೇಬಿಯಾದ ಜನತೆ ಮತ್ತಷ್ಟು ಹೆದರಿ ಕಂಗಾಲಾಗಿದ್ದಾರೆ.  ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೊರೆ ಸಲ್ಮಾನ್ ಆದೇಶದ ಮೇರೆಗೆ ಮೆಕ್ಕಾ ಮತ್ತು ಮದೀನಾ ಪವಿತ್ರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಒಂದು ಮೂಲದ ಪ್ರಕಾರ, ಸೌದಿ ಅರೇಬಿಯಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ವ್ಯಾಪಿಸಲಿದೆ ಎಂದು ಹೇಳಲಾಗುತ್ತಿದೆ.  ಒಟ್ಟಾರೆ, ಕೊರೊನಾ ದಾಳಿಯಿಂದ ಸೌದಿ ದೊರೆಗಳಲ್ಲದೆ ಜನಸಾಮಾನ್ಯರು ತತ್ತರಿಸಿದ್ದಾರೆ.

Facebook Comments

Sri Raghav

Admin