24 ಗಂಟೆಯೊಳಗೆ ಕೊರೊನಾ ಟೆಸ್ಟ್ ರಿಪೋರ್ಟ್ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.16- ಕೊರೊನಾ ಸೋಂಕು ತಗುಲಿದ ಶಂಕಿತ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ನಡೆಸಿ 24 ಗಂಟೆಯೊಳಗೆ ವೈದ್ಯಕೀಯ ವರದಿ ನೀಡುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸರ್.ಸಿ.ವಿ.ರಾಮನ್‍ನಗರದ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತ ವ್ಯಕ್ತಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಈವರೆಗೂ ಗಂಟಲು ದ್ರವ ಪಡೆದ ಮೂರ್ನಾಲ್ಕು ದಿನಗಳ ನಂತರ ವರದಿ ಬರುತ್ತಿತ್ತು. ಇನ್ನು ಮುಂದೆ 24 ಗಂಟೆಯೊಳಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹಾಸಿಗೆ ಸಾಮಥ್ರ್ಯಕ್ಕಿಂತಲೂ ಹೆಚ್ಚಿನ ಸೋಂಕಿತರು ಇದ್ದ ಪರಿಣಾಮ ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ವ್ಯತ್ಯಾಸವಾಗುತ್ತಿತ್ತು. ಈಗ ನಮಗೆ ಹೆಚ್ಚಿನ ಹಾಸಿಗೆಗಳು ಲಭ್ಯವಿರುವ ಕಾರಣ ಮುಂದೆ ಇಂತಹ ಸಮಸ್ಯೆಗಳು ಉದ್ಭವವಾಗುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬಿಐಇಸಿಯಲ್ಲಿ 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಲಭ್ಯವಿವೆ. ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲೂ ಹಾಸಿಗೆಗಳನ್ನು ನೀಡಲು ಸಮ್ಮತಿಸಿದ್ದಾರೆ.

ಯಾವ ವ್ಯಕ್ತಿಗೆ ಸೋಂಕು ಹಬ್ಬಿರುವುದು ಖಚಿತವಾಗುತ್ತದೆಯೋ ಅಂತವರಿಗೆ ವಾರ್ ರೂಮ್‍ನಿಂದಲೇ ಮಾಹಿತಿ ಲಭ್ಯವಾಗಲಿದ್ದು, ಬಿಬಿಎಂಪಿಯವರೇ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ ಎಂದರು.

ಈವರೆಗೆ ಲ್ಯಾಬ್‍ಗಳ ಸಂಖ್ಯೆ ಕಡಿಮೆ ಇದ್ದುದ್ದರಿಂದ ಹೆಚ್ಚಿನ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ಮೂರ್ನಾಲ್ಕು ದಿನದೊಳಗೆ ಪ್ರತಿದಿನ 30ರಿಂದ 40 ಸಾವಿರ ಮಂದಿಯನ್ನು ಏಕಕಾಲದಲ್ಲಿ ಪರೀಕ್ಷೆ ನಡೆಸುವ ಸಾಮಥ್ರ್ಯ ಹೊಂದಿದ್ದೇವೆ ಎಂದು ಹೇಳಿದರು.

ಕೊರೊನಾದಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರೋಗಿಗಳಿಗೆ ತಮ್ಮ ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆಯಿರಿ ಎಂದು ಸಚಿವರು ಮನವಿ ಮಾಡಿದರು.
ಈಗಾಗಲೇ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದರೆ ಅಂಥವರಿಗೆ ಪ್ರೋತ್ಸಾಹಧನವಾಗಿ 5000 ರೂ. ನೀಡಲಾಗುವುದು.

ಇದೊಂದು ಅಮೂಲ್ಯವಾದ ಸೇವೆಯಾಗಿದ್ದು, ಮಾನವೀಯತೆ ಹಾಗೂ ಅನುಕಂಪದ ಮೇಲೆ ಬೇರೆಯವರ ಜೀವನವನ್ನು ಉಳಿಸಬೇಕು. ಹೀಗಾಗಿ ಸ್ವಯಂಪ್ರೇರಿತರಾಗಿ ಮುಂದೆ ಬನ್ನಿ ಎಂದು ಕೋರಿದರು.

Facebook Comments

Sri Raghav

Admin