ಭಾರತದಲ್ಲಿ ಕೊರೋನಾ ಸುನಾಮಿ : 24 ಗಂಟೆಯಲ್ಲಿ 18,552 ಮಂದಿಗೆ ಪಾಸಿಟಿವ್, 384 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 27- ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ಭಾರೀ ಗಂಡಾಂತರಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಮುಂದೇನು ಎಂಬ ಭಯಭೀತ ವಾತಾವರಣ ನಿರ್ಮಾಣವಾಗಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ಆಘಾತಕಾರಿ ಮಟ್ಟದಲ್ಲಿ ಹೊಸ ದಾಖಲೆ ಮಟ್ಟದಲ್ಲಿ ಅಂದರೆ 18,552 ಸೋಂಕು ಪ್ರಕರಣಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 384 ರೋಗಿಗಳು ಅಸುನೀಗಿದ್ದಾರೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,550ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಮೊನ್ನೆ ದೇಶದಲ್ಲಿ 17,300 ಸೋಂಕು ಪ್ರಕರಣಗಳು ದಾಖಲಾಗಿತ್ತು.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ 8 ಸಾವಿರ ದಾಟಿದ್ದು, 15,650ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.  ನಿರಂತರ 17 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೇ 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ ಎಂಟನೆ ದಿನವಾಗಿದೆ.

ಒಂದೇ ದಿನ 17,000ಕ್ಕೂ ಹೆಚ್ಚು ಸಾಂಕ್ರಾಮಿಕ ರೋಗ ದೃಢಪಟ್ಟಿರುವುದು ಇದು ಎರಡನೇ ಬಾರಿ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 16,000 ಮತ್ತು ಸೋಂಕು ಬಾಧಿತರ ಸಂಖ್ಯೆ 5.20 ಲಕ್ಷ ತಲುಪುವ ಆತಂಕವಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 384 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 15,685ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 5.08,953 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

# 24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 384 ಸಾವಿನ ವಿವರ :
ಮಹಾರಾಷ್ಟ್ರ 175, ದೆಹಲಿ 63, ತಮಿಳುನಾಡು 46, ಉತ್ತರಪ್ರದೇಶ 19, ಗುಜರಾತ್ 18, ಹರಿಯಾಣ 13, ಆಂಧ್ರಪ್ರದೇಶ 12, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ತಲಾ 10, ತೆಲಂಗಾಣ 7, ಮಧ್ಯಪ್ರದೇಶ 4, ಪಂಜಾಬ್ 2 ಹಾಗೂ ಜಮ್ಮು-ಕಾಶ್ಮೀರ, ಛತ್ತೀಸ್‍ಗಢ, ಬಿಹಾರ, ರಾಜಸ್ತಾನ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದೊಂದು ಸಾವು ಪ್ರಕರಣ ವರದಿಯಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಿಲ್ಲರ್ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಹೆಮ್ಮಾರಿ ಆರ್ಭಟ ಆಘಾತಕಾರಿ ಮಟ್ಟದಲ್ಲಿಯೇ ಮುಂದುವರಿದಿದೆ.

ಈ ತಿಂಗಳ ಅಂತ್ಯ ಮತ್ತು ಜುಲೈನಲ್ಲಿ ಸಾಂಕ್ರಾಮಿಕ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.58.24ರಷ್ಟು ಏರಿಕೆ ಕಂಡುಬಂದಿದ್ದು, 2.96 ಲಕ್ಷ ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ.

Facebook Comments