ಬಿಗ್ ನ್ಯೂಸ್ : ಭಾರತದಲ್ಲಿ ಕೊರೋನಾ ರಣಕೇಕೆ, ಒಂದೇ ದಿನ 19,906 ಪಾಸಿಟಿವ್, 410 ಡೆತ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 28- ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ಭಾರೀ ಗಂಡಾಂತರಕಾರಿ ಮಟ್ಟದಲ್ಲಿ ಮುಂದುವರಿದಿದ್ದು, ಭಾರತೀಯರು ಹೆದರಿ ಕಂಗಲಾಗಿದ್ದಾರೆ.

ಕಳೆದ 24 ತಾಸುಗಳ ಅವಧಿಯಲ್ಲಿ ಆಘಾತಕಾರಿ ಮಟ್ಟದಲ್ಲಿ ಹಾಗೂ ಹೊಸ ದಾಖಲೆ ಮಟ್ಟದಲ್ಲಿ ಅಂದರೆ 19,906 ಸೋಂಕು ಪ್ರಕರಣಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 410 ರೋಗಿಗಳು ಅಸುನೀಗಿದ್ದಾರೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 19,900ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಗಿರುವುದು ಇದೇ ಮೊದಲು ಶುಕ್ರವಾರ 18,550ಕ್ಕೂ ಹೆಚ್ಚು ಮತ್ತು ಗುರುವಾರ ದೇಶದಲ್ಲಿ 17,300 ಸೋಂಕು ಪ್ರಕರಣಗಳು ದಾಖಲಾಗಿತ್ತು.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ 29 ಸಾವಿರ ದಾಟಿದ್ದು, 16,095ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನಿರಂತರ 18 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೆ, 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ ಒಂಭತ್ತನೇ ದಿನವಾಗಿದೆ.

ನಿರಂತರ ಐದು ದಿನಗಳಿಗೆ 15,000ಕ್ಕೂ ಅಧಿಕ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ. ಜೂನ್ 1ರಿಂದಲೂ ಸೋಂಕು ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 28 ದಿನಗಳಲ್ಲಿ ಒಟ್ಟು 3,38,324 ಮಂದಿಗೆ ರೋಗ ದೃಢಪಟ್ಟಿದೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 16,500 ಮತ್ತು ಸೋಂಕು ಬಾಧಿತರ ಸಂಖ್ಯೆ 5.35 ಲಕ್ಷ ತಲುಪುವ ಆತಂಕವಿದೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 410 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 16,095ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 5.28,859 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

# 24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 410 ಸಾವಿನ ವಿವರ:
ಮಹಾರಾಷ್ಟ್ರ 167, ತಮಿಳುನಾಡು 68, ದೆಹಲಿ 66, ಉತ್ತರಪ್ರದೇಶ 19, ಗುಜರಾತ್ 18, ಪಶ್ಚಿಮಬಂಗಾಳ 13, ರಾಜಸ್ತಾನ ಮತ್ತು ಕರ್ನಾಟಕ ತಲಾ 11, ಆಂಧ್ರಪ್ರದೇಶ 9, ಹರಿಯಾಣ 7, ಪಂಜಾಬ್ ಮತ್ತು ತೆಲಂಗಾಣ ತಲಾ 6, ಮಧ್ಯಪ್ರದೇಶ 4, ಜಮ್ಮು-ಕಾಶ್ಮೀರ 2 ಹಾಗೂ ಬಿಹಾರ, ಒಡಿಶಾ ಮತ್ತು ಪುದುಚೇರಿಗಳಲ್ಲಿ ತಲಾ ಒಂದೊಂದು ಸಾವು ಪ್ರಕರಣ ವರದಿಯಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಿಲ್ಲರ್ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಹೆಮ್ಮಾರಿ ಆರ್ಭಟ ಆಘಾತಕಾರಿ ಮಟ್ಟದಲ್ಲಿಯೇ ಮುಂದುವರಿದಿದೆ.

ಈ ತಿಂಗಳ ಅಂತ್ಯ ಮತ್ತು ಜುಲೈನಲ್ಲಿ ಸಾಂಕ್ರಾಮಿಕ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಜೊತೆಗೆ ಸಮುದಾಯ ಸೋಂಕು ಹಬ್ಬುವ ಭೀತಿಯೂ ಎದುರಾಗಿದೆ. ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.58.56 ರಷ್ಟು ಏರಿಕೆ ಕಂಡುಬಂದಿದ್ದು, 3.09 ಲಕ್ಷ ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ.

Facebook Comments