ಭಾರತದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ, ಒಂದೇ ದಿನ 507 ಬಲಿ, 18,653 ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜು.1-ಭಾರತದಲ್ಲಿ ಜೂನ್ ಮಾಸದಲ್ಲಿ ಅಬ್ಬರಿಸಿ ಬೊಬ್ಬಿರಿದ ಕೊರೊನಾ ವೈರಸ್ ಜುಲೈನಲ್ಲೂ ಮತ್ತಷ್ಟು ಉಗ್ರ ಸ್ವರೂಪದಲ್ಲಿ ಮುಂದುವರಿಸುವ ಆತಂಕದ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಮುನ್ಸೂಚನೆಯಾಗಿ ತಿಂಗಳ ಮೊದಲ ದಿನವೇ ಸೋಂಕು ಮತ್ತು ಸಾವು ಪ್ರಕರಣಗಳು ಆಘಾತಕಾರಿಯಾಗಿದೆ.

ಕಳೆದ 24 ತಾಸುಗಳಲ್ಲಿ ಆಘಾತಕಾರಿ ಮಟ್ಟದಲ್ಲಿ ಅಂದರೆ 18,653 ಸೋಂಕು ಪ್ರಕರಣಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 507 ಹೊಸ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದು ಸತತ ನಾಲ್ಕನೇ ದಿನ.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ 85 ಸಾವಿರ ಹಾಗೂ ಸಾವಿನ ಪ್ರಮಾಣ 18,000 ಸನಿಹದಲ್ಲಿದೆ.  ನಿರಂತರ 22 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ.

ಅಲ್ಲದೇ 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ 12ನೇ ದಿನವಾಗಿದೆ. ನಿರಂತರ ಎಂಟು ದಿನಗಳಿಂದ ದಿನಂಪ್ರತಿ 15,000ಕ್ಕೂ ಅಧಿಕ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 18,000 ಮತ್ತು ಸೋಂಕು ಬಾಧಿತರ ಸಂಖ್ಯೆ 6 ಲಕ್ಷ ತಲುಪುವ ಆತಂಕವಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 507 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 17,400ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 5,85,493 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 507 ಸಾವಿನ ವಿವರ : ಮಹಾರಾಷ್ಟ್ರ 245, ದೆಹಲಿ 62, ತಮಿಳುನಾಡು 60, ಉತ್ತರ ಪ್ರದೇಶ 25, ಕರ್ನಾಟಕ 20, ಗುಜರಾತ್ 19, ಪಶ್ಚಿಮ ಬಂಗಾಳ 15, ಮಧ್ಯಪ್ರದೇಶ ಮತ್ತು ರಾಜಸ್ತಾನ ತಲಾ 8, ಆಂಧ್ರಪ್ರದೇಶ ಮತ್ತು ತೆಲಂಗಾಣ ತಲಾ 7, ಜಮ್ಮು-ಕಾಶ್ಮೀರ ಮತ್ತು ಪಂಜಾಬ್ ತಲಾ 6, ಬಿಹಾರ 5, ಹರಿಯಾಣ 4, ಕೇರಳ, ಒಡಿಶಾ, ಪುದುಚೇರಿ ಮತ್ತು ಉತ್ತರಾಖಂಡ ತಲಾ 2, ಹಾಗೂ ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ತಲಾ ಒಂದೊಂದು ಸಾವು ಪ್ರಕÀರಣ ವರದಿಯಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜುಲೈ ಮತ್ತು ಅಗಸ್ಟ್‍ನಲ್ಲಿ ಸಾಂಕ್ರಾಮಿಕ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.59.43 ರಷ್ಟು ಏರಿಕೆ ಕಂಡುಬಂದಿದ್ದು, 3.47 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ.

Facebook Comments