ಭಾರತದಲ್ಲಿ ಕೊರೋನಾ ಬ್ಲಾಸ್ಟ್ : ಒಂದೇ ದಿನ 20,903 ಮಂದಿಗೆ ಕೊರೋನಾ, 379 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜು.3- ಕೋವಿಡ್ ವೈರಸ್ ಕಂಟಕದ ಕರ್ಮಕಾಂಡದಿಂದ ನಲುಗತ್ತಿರುವ ಭಾರತದಲ್ಲಿ ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳು ಗಂಡಾಂತರಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, 24 ತಾಸುಗಳಲ್ಲಿ 20,903 ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾಗಿದೆ.

ದೇಶದಲ್ಲಿ ಜುಲೈ ತಿಂಗಳ ಮೂರನೇ ದಿನವೂ ಆರ್ಭಟ ಅತಂಕಕಾರಿ ಮಟ್ಟದಲ್ಲೇ ಮುಂದುವರಿದಿದೆ. ಕಳೆದ 24 ತಾಸುಗಳಲ್ಲಿ ಭಯ ಮೂಡಿಸುವ ರೀತಿ ಅಂದರೆ 20,900ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 379 ಹೊಸ ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದು ಸತತ ಆರನೇ ದಿನ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ 25 ಸಾವಿರ ಹಾಗೂ ಸಾವಿನ ಪ್ರಮಾಣ 18,200 ದಾಟಿದೆ.

ನಿರಂತರ 24 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೇ 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ 14ನೇ ದಿನವಾಗಿದೆ. ನಿರಂತರ 10 ದಿನಗಳಿಂದ ದಿನಂಪ್ರತಿ 15,000ಕ್ಕೂ ಅಧಿಕ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 18,600 ಮತ್ತು ಸೋಂಕು ಬಾಧಿತರ ಸಂಖ್ಯೆ 6.40 ಲಕ್ಷ ತಲುಪುವ ಆತಂಕವಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 379 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 18,218ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 6,25,544 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 379 ಸಾವಿನ ವಿವರ : ಮಹಾರಾಷ್ಟ್ರ 124, ದೆಹಲಿ 61, ತಮಿಳುನಾಡು 57, ಗುಜರಾತ್ ಮತ್ತು ಕರ್ನಾಟಕ ತಲಾ 19, ಉತ್ತರ ಪ್ರದೇಶ 17, ಪಶ್ಚಿಮ ಬಂಗಾಳ 16, ಹರಿಯಾಣ 11, ಜಮ್ಮು-ಕಾಶ್ಮೀರ 10, ರಾಜಸ್ತಾನ 9, ಮಧ್ಯಪ್ರದೇಶ ಮತ್ತು ತೆಲಂಗಣ ತಲಾ 8, ಬಿಹಾರ 7, ಆಂಧ್ರಪ್ರದೇಶ 5, ಪಂಜಾಬ್ 3, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ತಲಾ 4, ಬಿಹಾರ 3, ಪುದುಚೇರಿ 2, ಕೇರಳ ಮತ್ತು ಉತ್ತರಾಖಂಡ ತಲಾ ಒಂದು ಸಾವು ಪ್ರಕÀರಣ ವರದಿಯಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜುಲೈ ಮತ್ತು ಅಗಸ್ಟ್‍ನಲ್ಲಿ ಸಾಂಕ್ರಾಮಿಕ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.60.73ರಷ್ಟು ಏರಿಕೆ ಕಂಡುಬಂದಿದ್ದು, 3.79 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ. ಭಾರತದಲ್ಲಿ ಈಗ 6.25 ಲಕ್ಷಕ್ಕೂ ಅಧಿಕ ಸೋಂಕಿತರಿದ್ದು, ಮೂರನೇ ಸ್ಥಾನದಲ್ಲಿರುವ ರಷ್ಯಾಗಿಂತ ಕೇವಲ 25,000 ಪ್ರಕರಣಗಳಷ್ಟು ಹಿಂದಿದೆ.

ಇನ್ನೆರಡು ದಿನಗಳಲ್ಲಿ ಭಾರತ ರಷ್ಯಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಅಮೆರಿಕ ಮತ್ತು ಬ್ರೆಜಿಲ್ ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಭಾರತ ಈಗಾಗಲೇ ಇಂಗ್ಲೆಂಡ್‍ನನ್ನು ಹಿಂದಕ್ಕೆ ಹಾಕಿ ನಾಲ್ಕನೆ ಸ್ಥಾನ ಅಕ್ರಮಿಸಿದೆ.

Facebook Comments