ಭಾರತದಲ್ಲಿ ಕೊರೋನಾ ಮಹಾಸ್ಫೋಟ : ಒಂದೇ ದಿನ 84,000 ಮಂದಿಗೆ ಪಾಸಿಟಿವ್, 1043 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.3-ದೇಶದಲ್ಲಿ ಕಿಲ್ಲರ್ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದೆ. ಆಗಸ್ಟ್‍ನಲ್ಲಿ ಏರುಗತಿಯಲ್ಲೇ ಮುಂದುವರಿದಿದ್ದ ಕೋವಿಡ್-19 ಹಾವಳಿ ಸೆಪ್ಟೆಂಬರ್‍ನಲ್ಲೂ ಗಂಡಾಂತರಕಾರಿ ಮಟ್ಟದಲ್ಲೇ ಸಾಗಿರುವುದು ಆತಂಕದ ಸಂಗತಿಯಾಗಿದೆ. ಸಾಂಕ್ರಾಮಿಕ ರೋಗದ ಮಹಾಸ್ಫೋಟದಲ್ಲಿ ಮತ್ತೆ ನಿನ್ನೆದಾಖಲೆ ಪ್ರಮಾಣದಲ್ಲಿ ಹೊಸ ವೈರಾಣು ಸೋಂಕುಗಳು ವರದಿಯಾಗಿವೆ.

ದೇಶದಲ್ಲಿ ನಿನ್ನೆಯಿಂದ ಇಂದು ಮುಂಜಾನೆವರೆಗೆ ಸುಮಾರು 84,000 ವೈರಸ್‍ರೋಗತಗುಲಿದ್ದು, 1,043 ಸಾವುಗಳು ಸಂಭವಿಸಿದೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ39ಲಕ್ಷ ಹಾಗೂ ಸಾವಿನ ಸಂಖ್ಯೆ67,000 ದಾಟಿರುವುದು ಆತಂಕದ ವಿದ್ಯಮಾನವಾಗಿದೆ.  ಕೋವಿಡ್ ಸಾಂಕ್ರಾಮಿಕ ರೋಗ ಮಹಾಸ್ಫೋಟದ ಪ್ರಕೋಪ ಸೆಪ್ಟಂಬರ್ ಆರಂಭದಲ್ಲೇ ಅಧಿಕವಾಗಿ ಕಂಡು ಬಂದಿದ್ದು, ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದು ವರದಿಯಾಗಿದೆ. ಅಲ್ಲದೇ ಕಳೆದ ವಾರ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸೋಂಕು ಪ್ರಕರಣಗಳು ಭಾರತದಲ್ಲಿದಾಖಲಾಗಿದೆ.

ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.77.09ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 4.55ಕೋಟಿಗೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.  ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 29.70ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿ ಹಿಡಿತದಿಂದ ಪಾರಾಗಿದ್ದಾರೆ.

24 ತಾಸುಗಳಲ್ಲಿ 1,043ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ68,000 ಸನಿಹದಲ್ಲಿದೆ. ಈವರೆಗಿನ ವರದಿಯಂತೆ 67,376 ಮಂದಿಯನ್ನು ಕಿಲ್ಲರ್ ಕೋವಿಡ್ ಬಲಿ ತೆಗೆದುಕೊಂಡಿದೆ. ಈವರೆಗೆ ಭಾರತದಲ್ಲಿ ರೋಗ ಪೀಡಿತರ ಪ್ರಮಾಣ 38,53,405 ದಾಟಿದೆ.

ದೇಶದಲ್ಲಿ ಈಗ 8,15,538 ಆಕ್ಟಿವ್ ಕೇಸ್‍ಗಳಿದ್ದು, 29,70,495ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿರೇಟ್‍ನಲ್ಲಿ ಮೂರುವರೆ ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಚೇತರಿಕೆ ಪ್ರಮಾಣ ಶೇ.77.09ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.75ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಂದರೆ 11,72,180 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 4.55ಕೋಟಿಗೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments