ವಿಶ್ವದಲ್ಲೇ ಕೊರೊನ ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನಕ್ಕೇರಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.7-ಈ ತಿಂಗಳ ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿಯುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ನಿಂದ ದೇಶದಲ್ಲಿ ಗಂಡಾಂತರಕಾರಿ ಪರಿಸ್ಥಿತಿ ತಲೆದೋರಿದೆ. ಸತತ ಎರಡನೇ ದಿನ 90,600ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ.

ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆ ಹೊಸ ದಾಖಲೆ ಪ್ರಮಾಣದಲ್ಲಿ ಅಂದರೆ 90,802 (ಮೊನ್ನೆ 90,632) ಮಂದಿಯಲ್ಲಿ ಸೋಂಕು ತಗುಲಿದ್ದು, 1,016 (ಮೊನ್ನೆ 1,065) ಜನರನ್ನು ಡೆಡ್ಲಿ ವೈರಸ್ ಬಲಿ ಪಡೆದಿದೆ. ದೇಶದಲ್ಲಿ ಒಟ್ಟಾರೆ ರೋಗಿಗಳ ಸಂಖ್ಯೆ 43 ಲಕ್ಷ ಸನಿಹವಿದ್ದು, ಮೃತರ ಪ್ರಮಾಣವೂ ಸಹ 72,000 ಸಮೀಪದಲ್ಲಿದೆ.

ಈ ತಿಂಗಳಲ್ಲಿ ಸತತ ಏಳನೇ ದಿನ 83,000+ ಪಾಸಿಟಿವ್ ಮತ್ತು 1,000ಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಆತಂಕಕಾರಿ ಸ್ಥಿತಿಗೆ ಸಾಕ್ಷಿಯಾಗಿದೆ. ಕೋವಿಡ್-19 ಹಾವಳಿ ಸೆಪ್ಟೆಂಬರ್‍ನಲ್ಲೂ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗಲಿದೆ ಎಂಬ ಆರೋಗ್ಯ ತಜ್ಞರ ಮುನ್ಸೂಚನೆಯಂತೆ ವೈರಸ್ ಹಾವಳಿ ಏರುಗತಿಯಲ್ಲೇ ಸಾಗಿದ್ದು, ಮುಂದಿನ ದಿನಗಳು ಅತ್ಯಂತ ಅಪಾಯಕಾರಿ ಎಂಬ ಆತಂಕಕ್ಕೆ ಕಾರಣವಾಗಿದೆ.

ಕೇವಲ 13 ದಿನಗಳಲ್ಲೇ 10 ಲಕ್ಷಕ್ಕೂ ಅಧಿಕ ಮಂದಿಗೆ ವೈರಾಣು ಸೋಂಕು ತಗುಲಿದೆ. ಆಗಸ್ಟ್ 7ರಂದು 10 ಲಕ್ಷ ಇದ್ದ ಸೋಂಕಿನ ಪ್ರಮಾಣ ಆ.23ರಂದು 20 ಲಕ್ಷಕ್ಕೇರಿತು. ನಂತರ ಕೇವಲ 16 ದಿನಗಳಲ್ಲಿ ಮತ್ತೆ 10 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗಿತ್ತು. ಸೆ.5 ರಂದು 40 ಲಕ್ಷ ದಾಟಿದೆ.  ಭಾರತವು ಈಗ ಬ್ರೆಜಿಲ್‍ನನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ.

ಅಮೆರಿಕ, ಬ್ರೆಜಿಲ್ ಮತ್ತು ಭಾರತ 42 ಲಕ್ಷ ಸೋಂಕು ಪ್ರಕರಣಗಳನ್ನು ದಾಟಿರುವ ವಿಶ್ವದ ಮೂರು ರಾಷ್ಟ್ರಗಳು ಎನಿಸಿವೆ.  ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೊರೊನಾ ಹಾವಳಿ ಕ್ರಮೇಣ ಇಳಿಮುಖವಾಗುತ್ತಿದ್ದರೆ, ಭಾರತದಲ್ಲಿ ಮಾತ್ರ ವೈರಸ್ ದಾಳಿ ಏರುಗತಿಯಲ್ಲಿರುವ ಚಿಂತೆಗೀಡು ಮಾಡುವ ಸಂಗತಿಯಾಗಿದೆ.ಭಾರತದಲ್ಲಿ ಕೇವಲ ಒಂದು ವಾರದಲ್ಲೇ ಸೋಂಕಿನ ಪ್ರಮಾಣ ಶೇ.13ರಷ್ಟು ಹೆಚ್ಚಳವಾಗಿದೆ.

ಸಾಂಕ್ರಾಮಿಕ ರೋಗದ ಮಹಾಸ್ಫೋಟದಲ್ಲಿ ಮತ್ತೆ ನಿನ್ನೆ ದಾಖಲೆ ಪ್ರಮಾಣದಲ್ಲಿ ಹೊಸ ವೈರಾಣು ಸೋಂಕುಗಳು ವರದಿಯಾಗಿವೆ. .ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.77.30ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 4.95 ಕೋಟಿಗೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 32.50 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ. 24 ತಾಸುಗಳಲ್ಲಿ 1,016 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 71,642ಕ್ಕೇರಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 42,04,613 ದಾಟಿದೆ.

ದೇಶದಲ್ಲಿ ಈಗ 8,82,542 ಆಕ್ಟಿವ್ ಕೇಸ್‍ಗಳಿದ್ದು, 32,50,430 ಹೆಚ್ಚು ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ಸುಮಾರು ನಾಲ್ಕು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ. ಚೇತರಿಕೆ ಪ್ರಮಾಣ ಶೇ.77.30ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.70ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ದೇಶದಾದ್ಯಂತ ನಿನ್ನೆ ಒಂದೇ ದಿನ 7,20,363 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 4,95,51,510ಕ್ಕೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments