ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 89,706 ಜನರಿಗೆ ಕೊರೋನಾ, 1115 ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.9-ವಿಶ್ವದ ಕೋವಿಡ್ ಹಾವಳಿ ಪೀಡಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಹೆಮ್ಮಾರಿಯ ಆರ್ಭಟ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. 24 ತಾಸುಗಳ ಅವಧಿಯಲ್ಲಿ 1,115 ರೋಗಿಗಳನ್ನು ಕೋವಿಡ್-19 ವೈರಸ್ ಬಲಿ ತೆಗೆದುಕೊಂಡಿದೆ. ಸತತ ಎರಡನೇ ದಿನ 1,110ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 73,890ಕ್ಕೇರಿದ್ದು, ಇಂದು ಸಂಜೆ ವೇಳೆಗೆ 74,000 ದಾಟಲಿದೆ.

ಈ ತಿಂಗಳ ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿಯುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ನಿಂದ ದೇಶದಲ್ಲಿ ಗಂಡಾಂತರಕಾರಿ ಪರಿಸ್ಥಿತಿ ತಲೆದೋರಿದೆ. ಸತತ ಎರಡು ದಿನಗಳಿಂದ 90,000ಕ್ಕೂ ಅಧಿಕ ಸಂಖ್ಯೆ ಸಾಂಕ್ರಾಮಿಕ ರೋಗ ಪ್ರಕರಣಗಳು ದಾಖಲಾಗಿದ್ದ ಭಾರತದಲ್ಲಿ ಮೊನ್ನೆ ಪಾಸಿಟಿವ್ ಪ್ರಕರಣ ಕೊಂಚ ಮಟ್ಟಿಗೆ ಕ್ಷೀಣಿಸಿತ್ತು. ನಿನ್ನೆ 89,706 ಕೇಸ್‍ಗಳು ವರದಿಯಾಗಿದೆ.

ಇದರೊಂದಿಗೆ ಒಟ್ಟು ರೋಗಿಗಳ ಸಂಖ್ಯೆ 43,70,128ಕ್ಕೇರಿದ್ದು, ಇಂದು ರಾತ್ರಿ ವೇಳೆಗೆ ಹೊತ್ತಿಗೆ 44 ಲಕ್ಷ ಮೀರುವ ಸಾಧ್ಯತೆ ಇದೆ. ಭಾನುವಾರ 90,802 ಮತ್ತು ಈ ತಿಂಗಳಲ್ಲಿ ಸತತ ಒಂಭತ್ತನೇ ದಿನ 1,000ಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಆತಂಕಕಾರಿ ಸ್ಥಿತಿಗೆ ಸಾಕ್ಷಿಯಾಗಿದೆ.

ಕೋವಿಡ್-19 ಹಾವಳಿ ಸೆಪ್ಟೆಂಬರ್‍ನಲ್ಲೂ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗಲಿದೆ ಎಂಬ ಆರೋಗ್ಯ ತಜ್ಞರ ಮುನ್ಸೂಚನೆಯಂತೆ ವೈರಸ್ ಹಾವಳಿ ಏರುಗತಿಯಲ್ಲೇ ಸಾಗಿದ್ದು, ಮುಂದಿನ ದಿನಗಳು ಅತ್ಯಂತ ಅಪಾಯಕಾರಿ ಎಂಬ ಆತಂಕಕ್ಕೆ ಕಾರಣವಾಗಿದೆ.

ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೊರೊನಾ ಹಾವಳಿ ಕ್ರಮೇಣ ಇಳಿಮುಖವಾಗುತ್ತಿದ್ದರೆ, ಭಾರತದಲ್ಲಿ ಮಾತ್ರ ವೈರಸ್ ದಾಳಿ ಏರುಗತಿಯಲ್ಲಿರುವ ಚಿಂತೆಗೀಡು ಮಾಡುವ ಸಂಗತಿಯಾಗಿದೆ.ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.73.77ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 5.18 ಕೋಟಿಗೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸುಮಾರು 9 ಲಕ್ಷ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ ಸುಮಾರು 34 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.

ದೇಶದಲ್ಲಿ ಈಗ 8,97,394 ಆಕ್ಟಿವ್ ಕೇಸ್‍ಗಳಿದ್ದು, 33,98,844ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ಸುಮಾರು ನಾಲ್ಕು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಚೇತರಿಕೆ ಪ್ರಮಾಣ ಶೇ.77.77ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.69ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದಾದ್ಯಂತ ನಿನ್ನೆ ಒಂದೇ ದಿನ 11,54,594 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 5,18,04,677ಕ್ಕೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments