ಭಾರತಕ್ಕೆ ಭಾರೀ ಕೊರೊನಾಘಾತ, ಒಂದೇ ದಿನ 11,000 ಮಂದಿಗೆ ಸೋಂಕು, 400 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 12-ಕಿಲ್ಲರ್ ಕೊರೊನಾ ವೈರಸ್ ಭಾರತದಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸುತ್ತಿದೆ. ಸೋಂಕು ಪ್ರಕರಣದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 11,000 ಸೋಂಕು ಮತ್ತು 400 ಸಾವುಗಳು ವರದಿಯಾಗಿರುವುದು ಘನಘೋರ ಪರಿಸ್ಥಿತಿಗೆ ಸಾಕ್ಷಿಯಾಗಿದೆ.  ಕಳೆದ 20 ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು ಸಾವಿನ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿಯೇ ಮುಂದುವರಿದಿದೆ.

24 ತಾಸುಗಳ ಅವಧಿಯಲ್ಲಿ ದಾಖಲೆ ಮಟ್ಟದಲ್ಲಿ ಅಂದರೆ ಅತ್ಯಧಿಕ 10,956 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 396 ರೋಗಿಗಳು ಬಲಿಯಾಗಿದ್ದಾರೆ.  ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 2.98ಲಕ್ಷಕ್ಕೇರಿದ್ದು, ಒಟ್ಟು 8,498 ಮಂದಿ ಮೃತಪಟ್ಟಿದ್ದಾರೆ. ಇಂದು ರಾತ್ರಿ ವೇಳೆಗೆ ಸಾವಿನ ಸಂಖ್ಯೆ 8,800ಕ್ಕೇರುವ ಆತಂಕವಿದೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದೇಶದಲ್ಲಿ 10,000ಕ್ಕೂ ಅಧಿಕ ಪಾಸಿಟಿವ್ ಕೇಸ್ ದಾಖಲಾಗಿರುವುದು ಇದೇ ಮೊದಲು ಅಲ್ಲದೇ ಸತತ ಒಂಭತ್ತು ದಿನಗಳಿಂದ ಸೋಂಕಿತರ ಸಂಖ್ಯೆ 9,000+ ಪ್ರಮಾಣದಲ್ಲೇ ಮುಂದುವರಿದಿದೆ. ನಿನ್ನೆ ಒಂದೇ ದಿನ 10,956 (ಬುಧವಾರ 9.996, ಮಂಗಳವಾರ 9,985, ಸೋಮವಾರ 9,987 ಭಾನುವಾರ 9,983, 9,971, ಶನಿವಾರ 9,971, ಶುಕ್ರವಾರ 9,887, ಗುರುವಾರ 9,851 ಮತ್ತು ಬುಧವಾರ 9,304) ಸೋಂಕು ಕೇಸ್‍ಗಳು ವರದಿಯಾಗಿದೆ.

ಭಾರತದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಇನ್ನೆರಡು ದಿನಗಳಲ್ಲಿ ಭಾರತವು ಈಗಿರುವ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಲಿದೆ. ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಅಮೆರಿಕ, ಬ್ರೆಜಿಲ್, ಮತ್ತು ರಷ್ಯಾ ದೇಶಗಳನ್ನು ಹಿಂದಿಕ್ಕುವ ಆತಂಕವೂ ಇದೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ 12ನೇ ದಿನವೂ ಆತಂಕಕಾರಿ ಮಟ್ಟದಲ್ಲಿ ನಿರಂತರವಾಗಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ.  ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 8,900 ಮತ್ತು ಸೋಂಕು ಬಾಧಿತರ ಸಂಖ್ಯೆ 3 ಲಕ್ಷ ತಲುಪುವ ಆತಂಕವಿದೆ. .

ದೇಶದಲ್ಲಿ ಒಂದೇ ದಿನ 9,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಇದು ನಿರಂತರ ಒಂಭತ್ತನೇ ದಿನ. ಸತತ 20 ದಿವಸಗಳಿಂದ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ 13 ದಿನವಾಗಿದ್ದು ದೇಶದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ.  ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಸತತ 12ನೆ ದಿನ 8,000ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 396 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 8.498ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 2,97,535 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 1,41,842ಕ್ಕೇರಿದೆ. ಈವರೆಗೆ 1,47,194 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.49.47ರಷ್ಟು ವೃದ್ದಿ ಕಂಡು ಬಂದಿರುವುದು ಹಾಗೂ ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ಸತತ ಮೂರನೇ ದಿನ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ. ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ.

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜÁಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಜೂನ್ ಕೊನೆ ವಾರಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂಬ ವರದಿಗಳಿದ್ದು, ಅದಕ್ಕೆ ಮುನ್ಸೂಚನೆಯಾಗಿ ಕಳೆದ 12 ದಿನಗಳಿಂದ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಆಘಾತಕಾರಿಯಾಗಿದೆ.

ಈ ಆಘಾತಕಾರಿ ಸನ್ನಿವೇಶದ ನಡುವೆಯೇ ಭಾರತವು ಸೋಂಕು ಪ್ರಮಾಣದಲ್ಲಿ ಬ್ರಿಟನ್‍ನನ್ನು ಹಿಂದಿಕ್ಕಿ ಈಗ ನಾಲ್ಕನೇ ಸ್ಥಾನಕ್ಕೇರಿದೆ. ಎರಡು ದಿನಗಳ ಹಿಂದಷ್ಟೇ ಭಾರತ ಐದನೇ ಸ್ಥಾನದಲ್ಲಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೂರನೇ ಸ್ಥಾನದಲ್ಲಿರುವ ರಷ್ಯಾವನ್ನು ಹಿಂದಿಕ್ಕುವ ಕಾಲ ದೂರವಿಲ್ಲ.

Facebook Comments