ಭಾರತದಲ್ಲಿ ಕೊರೊನಾ ಚೇತರಿಕೆಯಲ್ಲಿ ದಾಖಲೆ : ಒಂದೇ ದಿನ 96,000 ರೋಗಿಗಳು ಗುಣಮುಖ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.19-ದೇಶದಲ್ಲಿ ಕೋವಿಡ್-19 ಹಾವಳಿ ತೀವ್ರಗೊಂಡಿರುವ ನಡುವೆಯೇ ರೋಗಿಗಳ ಚೇತರಿಕೆ ಪ್ರಮಾಣದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಕೇವಲ ಒಂದೇ ದಿನದಲ್ಲಿ ಸುಮಾರು 96,000 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಕಳದೆ 24 ತಾಸುಗಳ ಅವಧಿಯಲ್ಲಿ ಸೋಂಕು ಪ್ರಕರಣಕ್ಕಿಂತ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಕಿಲ್ಲರ್ ಕೊರೊನಾ ದಾಳಿಯ ಎರಡನೇ ಅಲೆ ಆತಂಕದ ನಡುವೆಯೇ, ವೈರಾಣು ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಏರಿಳಿತದ ಆಟ ಮುಂದುವರಿದಿದ್ದು, ಭಾರತೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ.  ಒಂದೇ ದಿನ 93,337 ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಇದೇ ವೇಳೆ, 95,880 ರೋಗಿಗಳು ಚೇತರಿಸಿಕೊಂಡಿರುವುದು ದಾಖಲೆಯಾಗಿದೆ.

ಒಂದೇ ದಿನ 1,247 ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ 15ನೇ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 85,620 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.  ಭಾರತದಲ್ಲಿ 19 ದಿನಗಳಿಂದಲೂ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ನಿನ್ನೆ 93,337 ಸೋಂಕು ಪ್ರಕರಣಗಳೊಂದಿಗೆ. ಒಟ್ಟು ರೋಗಿಗಳ ಸಂಖ್ಯೆ 53,08,074ಕ್ಕೇರಿದ್ದು, ನಾಳೆ ವೇಳೆಗೆ 54 ಲಕ್ಷ ಮೀರುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆ.5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.15ರಂದು 50 ಲಕ್ಷ ದಾಟಿದೆ.  ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅಕ್ಟೋಬರ್ ವೇಳೆಗೆ ದೇಶದಲ್ಲಿ 80 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುವ ಆತಂಕವಿದೆ.

ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.79.28ರಷ್ಟು ವೃದ್ದಿ ಕಂಡು ಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 6.24 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡು ಬಂದಿದ್ದರೂ, ಮತ್ತೊಂದೆಡೆ 10.13 ಲಕ್ಷ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ.

ಇದರ ನಡುವೆಯೂ ಸುಮಾರು 42.08 ಲಕ್ಷ ಮಂದಿ ಹೆಮ್ಮಾರಿಯ ಬಿಗಿ ಹಿಡಿತದಿಂದ ಪಾರಾಗಿದ್ದಾರೆ.  ದೇಶದಲ್ಲಿ ಈಗ 10,13,764 ಆಕ್ಟಿವ್ ಕೇಸ್‍ಗಳಿವೆ. 42,08,437 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.79.28ಕ್ಕೇರಿದ್ದು, ಮರಣ ಪ್ರಮಾಣ ಶೇ.1.67ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಧಿಕ ಹೆಚ್ಚಳ ಕಂಡು ಬಂದಿರುವುದು ಸಮಾಧಾನಕರ ಸಂಗತಿ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ 8,87,977 ಲಕ್ಷಕ್ಕೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 6,24,54,254 ಕೋಟಿಗೂ ಅಧಿಕ ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments