ಭಾರತದಲ್ಲಿ ಒಂದೇ ದಿನ ಕೊರೋನಾದಿಂದ ಗುಣಮುಖರಾದ 1 ಲಕ್ಷ ಸೋಂಕಿತರು..!

ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ/ಮುಂಬೈ, ಸೆ.22-ಡೆಡ್ಲಿ ಕೋವಿಡ್-19 ವೈರಸ್ ಹಾವಳಿಯ ಏರಿಳಿತದ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ವಿಶ್ವದಲ್ಲೇ ಭಾರತ ಹೊಸ ದಾಖಲೆ ನಿರ್ಮಿಸಿದೆ. 24 ತಾಸುಗಳ ಅವಧಿಯಲ್ಲಿ 1,01,468 ರೋಗಿಗಳು ಗುಣಮುಖರಾಗಿದ್ದಾರೆ. ಈ ಮೂಲಕ ರಿಕವರಿ ರೇಟ್ ಶೇ.80.86ಕ್ಕೇರಿದೆ. ಈವರೆಗೆ 44.97 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಮತ್ತೊಂದು ಆಶಾದಾಯಕ ಸಂಗತಿ ಎಂದರೆ ಸೆಪ್ಟೆಂಬರ್ 8ರ ನಂತರ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 76,000ಕ್ಕೆ ಇಳಿದಿದೆ. ಇದು ಆಶಾದಾಯತಕ ಬೆಳವಣಿಗೆಯಾಗಿದ್ದು, ಭಾರತೀಯರಲ್ಲಿ ನಿರಾಳ ಭಾವ ಮೂಡಿಸಿದೆ. ಒಂದೇ ದಿನ 75,809 ಮಂದಿಗೆ ಸೋಂಕು ತಗಲಿದ್ದು, ಕಳೆದ ಐದು ದಿನಗಳಿಂದ ಹೊಸ ಪ್ರಕರಣಗಳಲ್ಲಿ ಸತತ ಇಳಿಕೆ ಕಂಡುಬಂದಿದೆ.
ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಇಳಿಕೆಯಾಗುತ್ತಿದೆ. ಒಂದೇ ದಿನ 1,053 (ಮೊನ್ನೆ 1,130) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ 18ನೇ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 88,935 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಎರಡು ವಾರಗಳ ಬಳಿಕ ಸೋಂಕಿತರ ಸಂಖ್ಯೆ 75,809ಕ್ಕೆ ಇಳಿದಿದೆ.  ಒಟ್ಟು ರೋಗಿಗಳ ಸಂಖ್ಯೆ 55,63,663ಕ್ಕೇರಿದ್ದು, ನಾಳೆ ವೇಳೆಗೆ 55 ಲಕ್ಷ ಮೀರುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11  ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ.
ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.80.86ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 6.53 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.  ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದೂ, ಮತ್ತೊಂದೆಡೆ 9.75 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ.  ಈ ನಡುವೆ ಸುಮಾರು 44.98 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.
ದೇಶದಲ್ಲಿ ಈಗ 9,75,867 ಆಕ್ಟಿವ್ ಕೇಸ್‍ಗಳಿವೆ. 44,97,867 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.80.86 ಕ್ಕೇರಿದ್ದು, ಮರಣ ಪ್ರಮಾಣ ಶೇ.1.60ಕೆ  ಇಳಿದಿದೆ. ಸಕ್ರಿಯ ಪ್ರಕರಣಗಳಿಗೆ  ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಧಿಕ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.
ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ದೇಶದಾದ್ಯಂತ ನಿನ್ನೆ ಒಂದೇ ದಿನ 9.33 ಲಕ್ಷಕ್ಕೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 6.53 ಕೋಟಿಗೂ ಅಧಿಕ ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.
Facebook Comments