ಭಾರತದಲ್ಲಿ ಒಂದೇ ದಿನ 83,347 ಹೊಸ ಕೊರೊನ ಸೋಂಕು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.23-ಡೆಡ್ಲಿ ಕೋವಿಡ್-19 ವೈರಸ್ ಹಾವಳಿಯ ಏರಿಳಿತದ ಆಟ ಮುಂದುವರಿದಿದ್ದು, ಜನರು ಪ್ರಾಣ ಸಂಕಟದಲ್ಲಿ ಕಂಗಾಲಾಗಿದ್ದಾರೆ. ಮೊನ್ನೆ ಸೋಂಕು ಪ್ರಕರಣದಲ್ಲಿ ಇಳಿಕೆ ಕಂಡ ಬೆನ್ನಲ್ಲೇ ಪಾಸಿಟಿವ್ ಕೇಸ್‍ನಲ್ಲಿ ತುಸು ಏರಿಕೆಯಾಗಿದೆ. ಒಂದೇ ದಿನ ಮತ್ತೆ 83,347 (ಮೊನ್ನೆ 75,809) ಮಂದಿಗೆ ಸೋಂಕು ತಗಲಿದ್ದು, ಹೊಸ ಪ್ರಕರಣಗಳಲ್ಲಿ ಏರಿಳಿತ ಕಂಡುಬಂದಿದೆ.

ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಸಹ ಇದೇ ಪ್ರವೃತ್ತಿ ಗೋಚರಿಸಿದೆ. ಒಂದೇ ದಿನ 1,085 (ಮೊನ್ನೆ 1,053) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ 19ನೇ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 90,000 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಎರಡು ವಾರಗಳ ಬಳಿಕ ಸೋಂಕಿತರ ಸಂಖ್ಯೆ ಮೊನ್ನೆ 75,809ಕ್ಕೆ ಇಳಿದಿತ್ತು. ನಿನ್ನೆ ಮತ್ತೆ 83,347 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು ಒಟ್ಟು ರೋಗಿಗಳ ಸಂಖ್ಯೆ 56,46,010ಕ್ಕೇರಿದ್ದು, ನಾಳೆ ವೇಳೆಗೆ 57 ಲಕ್ಷ ದಾಟಲಿದೆ.  ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆ.5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ.

ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.80.25ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 6.62 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.  ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡು ಬಂದಿದ್ದೂ, ಮತ್ತೊಂದೆಡೆ 9.68 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳಲಿ ಏರಿಳಿತ ಮುಂದುವರಿದಿದೆ.

ಈ ನಡುಮೆ 45.87 ಲಕ್ಷ ಮಂದಿ ಹೆಮ್ಮಾರಿಯ ಬಿಗಿ ಹಿಡಿತದಿಂದ ಪಾರಾಗಿದ್ದಾರೆ.  ದೇಶದಲ್ಲಿ ಈಗ 9,68,377 ಆಕ್ಟಿವ್ ಕೇಸ್‍ಗಳಿವೆ. 45,87,613 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.80.25ಕ್ಕೇರಿದ್ದು, ಮರಣ ಪ್ರಮಾಣ ಶೇ.1.59ಕೆ ಇಳಿದಿದೆ.  ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಧಿಕ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆÉ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ 9.53 ಲಕ್ಷಕ್ಕೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 6.62 ಕೋಟಿಗೂ ಅಧಿಕ ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments