ಭಾರತದಲ್ಲಿ 62,212 ಹೊಸ ಕರೋನ ಪ್ರಕರಣ, 837 ಮಂದಿ ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ಅ.17- ಡೆಡ್ಲಿ ಕೊರೊನಾ ವೈರಸ್‍ನ ಆರ್ಭಟ ಕ್ರಮೇಣ ಕಡಿಮೆಯಾಗುವ ಮನ್ಸೂಚನೆಗಳು ಲಭಿಸುತ್ತಿವೆ. ನಿನ್ನೆ ಮತ್ತೆ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಇದೇ ವೇಳೆ ಸಾವಿನ ಸಂಖ್ಯೆಯಲ್ಲಿ ಅಲ್ಪ ಇಳಿಕೆಯಾಗಿದೆ.  ನಿನ್ನೆ 62,212 ಹೊಸ ಕೇಸ್‍ಗಳು ದಾಖಲಾಗಿವೆ. ಮೊನ್ನೆ 63,370ಕ್ಕಿಂತಲೂ ಹೆಚ್ಚಳ ವರದಿಯಾಗಿತ್ತು.

ಈ ನಡುವೆ ಸತತ ಒಂಭತ್ತು ದಿನಗಳಿಂದಲೂ 9 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲೇ ಸಕ್ರಿಯ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ, ಒಂದೂವರೆ ತಿಂಗಳಲ್ಲಿ ಇದೇ ಮೊದಲ ಬಾರಿಗೆ 8 ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಜತೆಗೆ ನಿರಂತರ 14 ದಿನಗಳಿಂದಲೂ ಸಾವಿನ ಸಂಖ್ಯೆ 1,000ಕ್ಕಿಂತ ಕಡಿಮೆಯಾಗಿಯೇ ಮುಂದುವರಿದಿದೆ. ಇವೆಲ್ಲವೂ ಡೆಡ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಸ್ಪಷ್ಟ ಸೂಚನೆಯಾಗಿದ್ದರೂ, ಡೆಡ್ಲಿ ವೈರಸ್ ಏರಿಳಿತದ ಆಟವಂತೂ ಮುಂದುವರಿಯುವ ಆತಂಕವೂ ಇದೆ.

ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 75 ಲಕ್ಷ ಸನಿಹದಲ್ಲಿರುವುದು ಮತ್ತು ಮೃತರ ಸಂಖ್ಯೆ 1.13 ಲಕ್ಷ ದಾಟಿರುವುದು ಜನರಲ್ಲಿ ಭಯಾಂತಕ ಮುಂದುವರಿಯುವಂತೆ ಮಾಡಿದೆ.  ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 65.24 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.87.78ರಷ್ಟ ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.52ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ.

ನಿನ್ನೆ ಸೋಂಕು ಮತ್ತು ಸಾವು ಪ್ರಮಾಣ ಇಳಿಕೆಯಾಗಿದ್ದು, ನಿನ್ನೆ ಒಂದೇ ದಿನ 837 ಮಂದಿ ಬಲಿಯಾಗಿದ್ದಾರೆ. ಮೊನ್ನೆ 895 ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 1,12,998 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 74,32,680ರಷ್ಟಿದ್ದು, ನಾಳೆ ವೇಳೆಗೆ 75 ಲಕ್ಷ ದಾಟಲಿದೆ.

ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ.  ನಿನ್ನೆ ಸಕ್ರಿಯ ಪ್ರಕರಣಗಳಲ್ಲಿ ಮತ್ತೆ 9 ಲಕ್ಷ ಪ್ರಮಾಣಕ್ಕಿಂತಲೂ ಕಡಿಮೆ ವರದಿಯಾಗಿದ್ದು, ಸತತ ಒಂಭತ್ತು ದಿನಗಳಿಂದ ಇದು ಕ್ಷೀಣಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 45 ದಿನಗಳ ಬಳಿ ನಿನ್ನೆ ಇದೇ ಮೊದಲ ಬಾರಿ 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು, 7,95,087 ಆಕ್ಟಿವ್ ಕೇಸ್‍ಗಳು ದಾಖಲಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆÉ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ ಸುಮಾರು 10 ಲಕ್ಷ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 9.32 ಕೋಟಿಗೂ ಅಧಿಕ ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments