ಭಾರತದಲ್ಲಿ ಕೊರೊನಾ ಅಟ್ಟಹಾಸ : ಒಂದೇ ದಿನ 11,458 ಮಂದಿಗೆ ಪಾಸಿಟಿವ್, 3.09 ಲಕ್ಷ ಸೋಂಕಿತರು ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 13-ಕಿಲ್ಲರ್ ಕೊರೊನಾ ವೈರಸ್ ಭಾರತದಲ್ಲಿ ಮೃತ್ಯುಕೂಪ ಸದೃಶ ಆತಂಕಕಾರಿ ವಾತಾವರಣ ಸೃಷ್ಟಿಸುತ್ತಿದೆ. ದೇಶದಲ್ಲಿ 24 ಗಂಟೆಗಳಲ್ಲಿ 11,458 ಸೋಂಕು ಮತ್ತು 387 ಸಾವುಗಳು ವರದಿಯಾಗಿರುವುದು ಭೀಕರ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಕಳೆದ 21 ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು ಸಾವಿನ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿಯೇ ಮುಂದುವರಿದಿದೆ.

24 ತಾಸುಗಳ ಅವಧಿಯಲ್ಲಿ ಹೊಸ ದಾಖಲೆ ಮಟ್ಟದಲ್ಲಿ ಅಂದರೆ ಅತ್ಯಧಿಕ 11,458 ಮಂದಿಗೆ ಸೋಂಕು ತಗುಲಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ 11,000 ದಾಟಿರುವುದು ಇದೇ ಮೊದಲು. ಇದೇ ಅವಧಿಯಲ್ಲಿ 387 ಮಂದಿ ಸಾವಿಗೀಡಾಗಿದ್ದಾರೆ. ಮೊನ್ನೆ 396 ರೋಗಿಗಳು ಬಲಿಯಾಗಿದ್ದಾರೆ. ದೇಶದಲ್ಲಿ ಸತತ ಮೂರು ದಿನಗಳಿಂದ ಮೃತರ ಸಂಖ್ಯೆ 300 ಮೀರಿರುವುದು ಸಹ ಆಘಾತಕಾರಿ ವಿದ್ಯಮಾನವಾಗಿದೆ.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 3,08,993ಕ್ಕೇರಿದ್ದು, ಒಟ್ಟು 8,884 ಮಂದಿ ಮೃತಪಟ್ಟಿದ್ದಾರೆ. ಇಂದು ರಾತ್ರಿ ವೇಳೆಗೆ ಸಾವಿನ ಸಂಖ್ಯೆ 9,000ಕ್ಕೇರುವ ಆತಂಕವಿದೆ.ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದೇಶದಲ್ಲಿ 11,000ಕ್ಕೂ ಅಧಿಕ ಪಾಸಿಟಿವ್ ಕೇಸ್ ದಾಖಲಾಗಿರುವುದು ಇದೇ ಮೊದಲು. ಮೊನ್ನೆ ಪ್ರಥಮ ಬಾರಿ ಸೋಂಕಿತರ ಸಂಖ್ಯೆ 10,000 ದಾಟಿತ್ತು.

ಅಲ್ಲದೇ ಸತತ ಹತ್ತು ದಿನಗಳಿಂದ ಸೋಂಕಿತರ ಸಂಖ್ಯೆ 9,000+ ಪ್ರಮಾಣದಲ್ಲೇ ಮುಂದುವರಿದಿದೆ. ನಿನ್ನೆ ಒಂದೇ ದಿನ 11,458 (ಗುರುವಾರ 10,956 ಬುಧವಾರ 9.996, ಮಂಗಳವಾರ 9,985, ಸೋಮವಾರ 9,987 ಭಾನುವಾರ 9,983, 9,971, ಶನಿವಾರ 9,971, ಶುಕ್ರವಾರ 9,887, ಗುರುವಾರ 9,851 ಮತ್ತು ಬುಧವಾರ 9,304) ಸೋಂಕು ಕೇಸ್‍ಗಳು ವರದಿಯಾಗಿದೆ.

ಭಾರತದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಇನ್ನೆರಡು ದಿನಗಳಲ್ಲಿ ಭಾರತವು ಈಗಿರುವ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಲಿದೆ. ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಅಮೆರಿಕ, ಬ್ರೆಜಿಲ್, ಮತ್ತು ರಷ್ಯಾ ದೇಶಗಳನ್ನು ಹಿಂದಿಕ್ಕುವ ಆತಂಕವೂ ಇದೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ 13ನೇ ದಿನವೂ ಆತಂಕಕಾರಿ ಮಟ್ಟದಲ್ಲಿ ನಿರಂತರವಾಗಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 9,200 ಮತ್ತು ಸೋಂಕು ಬಾಧಿತರ ಸಂಖ್ಯೆ 3.20 ಲಕ್ಷ ತಲುಪುವ ಆತಂಕವಿದೆ. . ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 387 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 8.884ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 3.09 ಲಕ್ಷ ಸನಿಹದಲ್ಲಿದೆ ಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 387 ಸಾವಿನ ವಿವರ :
ದೆಹಲಿ 139, ಮಹಾರಾಷ್ಟ್ರ 127, ಗುಜರಾತ್ 30, ಉತ್ತರಪ್ರದೇಶ 20, ತಮಿಳುನಾಡು 18, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಧ್ಯಪ್ರದೇಶ ತಲಾ 9, ಕರ್ನಾಟಕ ಮತ್ತು ರಾಜಸ್ತಾನ ತಲಾ 8, ಹರಿಯಾಣ ಮತ್ತು ಉತ್ತರಾಖಂಡ ತಲಾ 6, ಪಂಜಾಬ್ 4, ಆಂದ್ರಪ್ರದೇಶ, 2 ಹಾಗೂ ಕೇರಳ, ಜಮ್ಮು-ಕಾಶ್ಮೀರ ಮತ್ತು ಒಡಿಶಾ ರಾಜ್ಯಗಳಲ್ಲಿ ತಲಾ ಒಂದೊಂದು ಸಾವು ಪ್ರಕರಣ ವರದಿಯಾಗಿದೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 1,45,779ಕ್ಕೇರಿದೆ. ಈವರೆಗೆ 1,54,329 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.49.90ರಷ್ಟು ವೃದ್ದಿ ಕಂಡುಬಂದಿದೆ, ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ಸತತ ನಾಲ್ಕನೇ ದಿನ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಈ ಆಘಾತಕಾರಿ ಸನ್ನಿವೇಶದ ನಡುವೆಯೇ ಭಾರತವು ಸೋಂಕು ಪ್ರಮಾಣದಲ್ಲಿ ಬ್ರಿಟನ್‍ನನ್ನು ಹಿಂದಿಕ್ಕಿ ಈಗ ನಾಲ್ಕನೇ ಸ್ಥಾನಕ್ಕೇರಿದೆ. ಎರಡು ದಿನಗಳ ಹಿಂದಷ್ಟೇ ಭಾರತ ಐದನೇ ಸ್ಥಾನದಲ್ಲಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೂರನೇ ಸ್ಥಾನದಲ್ಲಿರುವ ರಷ್ಯಾವನ್ನು ಹಿಂದಿಕ್ಕುವ ಕಾಲ ದೂರವಿಲ್ಲ. ಆಗಸ್ಟ್ ಮಧ್ಯಭಾಗದವರೆಗೂ ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿಯಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Facebook Comments