ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4 ಲಕ್ಷ ಗಡಿಯತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.20- ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 4 ಲಕ್ಷ ಗಡಿಯತ್ತ ದಾಪುಗಾಲಿಟ್ಟಿದ್ದು , ನಿನ್ನೆ ಒಂದೇ ದಿನ 14,516 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 375 ಮಂದಿ ಸಾವನ್ನಪ್ಪುವ ಮೂಲಕ ಇದುವರೆಗೂ ಮೃತಪಟ್ಟವರ ಸಂಖ್ಯೆ 12,948ಕ್ಕೆ ಏರಿಕೆಯಾಗಿದೆ.

ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮುಂಜಾನೆಯವರೆಗೂ 3,95,048 ಮಂದಿ ಕೊರೊನಾ ಪೀಡಿತರಾಗಿದ್ದು , ಇದರ ಜತೆ ಸೋಂಕಿನಿಂದ ಚೇತರಿಸಿ ಕೊಳ್ಳುತ್ತಿರುವವರ ಪ್ರಮಾಣವೂ ಹೆಚ್ಚಳವಾಗುತ್ತಿರುವುದು ತುಸು ನೆಮ್ಮದಿ ತಂದಿದೆ. 3,95,048 ಸೋಂಕಿತರಲ್ಲಿ ಇದುವರೆಗೂ 2,13,830 ಮಂದಿ ಸೋಂಕಿನಿಂದ ಮುಕ್ತರಾಗಿದ್ದರೆ 1,68,269 ಮಂದಿ ಸೋಂಕಿನಿಂದ ನರಳುತ್ತಿದ್ದಾರೆ.

ಸೋಂಕಿತರಲ್ಲಿ ಶೇ.54.12ರಷ್ಟು ಮಂದಿ ಚೇತರಿಸಿಕೊಂಡಿದ್ದು , ಸೋಂಕು ಮುಕ್ತಗೊಳ್ಳುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜೂ.1ರಿಂದ ಇಲ್ಲಿಯವರೆಗೂ 2 ಲಕ್ಷ ಮಂದಿಗೆ ಸೋಂಕು ಹರಡಿರುವುದು ಖಚಿತಪಟ್ಟಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕಿತರಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

Facebook Comments