ಸ್ವಗ್ರಾಮಗಳತ್ತ ಕಾರ್ಮಿಕರ ವಲಸೆ : ಬೆಂಗಳೂರಲ್ಲೂ ದೆಹಲಿ ಪರಿಸ್ಥಿತಿ ನಿರ್ಮಾಣವಾಗದಂತೆ ಇಚ್ಛೆತ್ತ ಜಿಲ್ಲಾಡಳಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.28- ದೆಹಲಿಯಲ್ಲಿ ಕಾರ್ಮಿಕರು ಸಾಮೂಹಿಕವಾಗಿ ವಲಸೆ ಹೋಗುತ್ತಿರುವ ದೃಶ್ಯಗಳು ಕರಳು ಕಿವುಚುತ್ತಿವೆ. ಬೆಂಗಳೂರಿನಲ್ಲೂ ಆ ರೀತಿಯ ಸನ್ನಿವೇಶ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಬೆಂಗಳೂರು ಜಿಲ್ಲಾಡಳಿತ ಕೂಲಿ ಕಾರ್ಮಿಕರಿಗೆ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮಾಡುತ್ತಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಮತ್ತವರ ತಂಡ ನಿನ್ನೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಥಮ ಹಂತದಲ್ಲಿ ಬೆಂಗಳೂರಿನ ಹೊರ ವಲಯದಲ್ಲಿರುವ ಮೂರು ಅಪಾರ್ಟ್ ಮೆಂಟ್ ಮತ್ತು ಎರಡು ಹಾಸ್ಟೇಲ್ ಗಳನ್ನು ಗುರುತಿಸಿದೆ. ಹೊಸದಾಗಿ ನಿರ್ಮಿಸಲಾದ ಅಪಾರ್ಟ್ ಮೆಂಟ್ ಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.

ತಹಶೀಲ್ದಾರ್ ಅವರಗಳು ಅಪಾರ್ಟ್ ಮೆಂಟ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ನಿರ್ಮಾಣಗೊಂಡು ಸ್ವಾಧೀನಕ್ಕೆ ಸಿದ್ದವಾಗುತ್ತಿದ್ದ ಅಪಾರ್ಟ್ ಮೆಂಟ್ಗಳನ್ನು ಕಾರ್ಮಿಕರ ತಾತ್ಕಾಲಿಕ ವಸತಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.ಊಟಕ್ಕೆ ದಾನಿಗಳ ಸಹಕಾರ ಕೋರಲಾಗುತ್ತಿದೆ. ಪರ್ಯಾಯವಾಗಿ ಇಂದಿರಾ ಕ್ಯಾಂಟಿನ್ ಕೂಡ ಸಿದ್ದವಿಡಲಾಗುತ್ತಿದೆ.

ಅನರ್ಹರು ಇಲ್ಲಿ ಸೇರಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಪೊಲೀಸರು ಈ ನಿಟ್ಟಿನಲ್ಲಿ ಖುದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರನ್ನು ಒಳಗೊಂಡಂತೆ ನಾಲ್ಕು ಮಂದಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಸಂಕಷ್ಟದಲ್ಲಿರುವ ಕಾರ್ಮಿಕರನ್ನು ತಾತ್ಕಾಲಿಕ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಿದೆ.

ತುರ್ತು ಮಾಹಿತಿಗಾಗಿ ಜಿಲ್ಲಾಡಳಿತ ಇಂದು ಸಹಾಯವಾಣಿಯನ್ನು ಆರಂಭಿಸಿದೆ. ಅಲ್ಲಿಗೆ ಕರೆ ಮಾಡಿ ಮಾಹಿತಿ ಕೊಟ್ಟರೆ ಕೂಡಲೇ ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕೆ ಹೋಗಿ ಕಾರ್ಮಿಕರಿಗೆ ನೆರವು ನೀಡಲಿದೆ. ಜಿಲ್ಲಾಧಿಕಾರಿಯವರು ಇಂದು ಈ ಕೇಂದ್ರಗಳನ್ನು ಆರಂಭಿಸಿದ್ದು, ಅಗತ್ಯ ಕಂಡು ಬಂದರೆ ಮತ್ತಷ್ಟು ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಕಾರ್ಮಿಕ ಕಲ್ಯಾಣ ನಿಧಿಯ ಹಣ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿದೆ.

ಲಾಕ್ ಡೌನ್ ನಿಂದಾಗಿ ಕಾರ್ಮಿಕರಿಗೆ ಕೆಲಸವಿಲ್ಲದೆ, ಆದಾಯ ಇಲ್ಲದೆ ಜೀವನ ನಿರ್ವಹಣೆ ದುಸ್ತರವಾಗಿದೆ. ಭೀಕ್ಷುಕರು, ಅಶಕ್ತರು ಕೂಡ ಸಂಕಷ್ಟದಲ್ಲಿದ್ದಾರೆ. ಅಂತಹವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

Facebook Comments

Sri Raghav

Admin