ಕೊರೋನಾ ಹೊಡೆತಕ್ಕೆ ಅಮೆರಿಕ ಅಲ್ಲೋಲ ಕಲ್ಲೋಲ, 50,000 ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.24-ಸೈಲೆಂಟ್ ಕಿಲ್ಲರ್ ಕೊರೊನಾ ವೈರಸ್ ದಾಳಿ ಅಮೆರಿಕ ಅಲ್ಲೋಲ ಕಲ್ಲೋಲವಾಗಿದೆ. ಅಧಿಕೃತ ವರದಿಗಳ ಪ್ರಕಾರ ವಿಶ್ವದಲ್ಲೇ ಕೋವಿಡ್-19ಗೆ ಅತಿಹೆಚ್ಚು ರೋಗಿಗಳು ಬಲಿಯಾದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಪಾತ್ರವಾಗಿದೆ. ಸೂಪರ್‍ಪವರ್ ದೇಶದಲ್ಲಿ ಮೃತರ ಸಂಖ್ಯೆ 50,000ಕ್ಕೇರಿದೆ. ಅಲ್ಲದೇ 9 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ.

ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಮುಂದಿನ 24 ತಾಸುಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ವಾಷಿಂಗ್ಟನ್‍ನ ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಂಕ ಅಂಶಗಳ ಪ್ರಕಾರ, ನಿನ್ನೆ ಒಂದೇ ದಿನದ ಅವಧಿಯಲ್ಲಿ ಅಮೆರಿಕದಲ್ಲಿ 3,178 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಸುಮಾರು 4,000 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

ಸ್ವಲ್ಪ ಸಮಾಧಾನಕರ ಸಂಗತಿ ಎಂದರೆ ಅಮೆರಿಕದಲ್ಲಿ ಈವರೆಗೆ 86,000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಿಲ್ಲರ್ ವೈರಸ್ ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ ಸುಮಾರು 19,600 ಮಂದಿಯನ್ನು ಕೊರೊನಾ ವೈರಸ್ ಬಲಿ ಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ.

ಅಮೆರಿಕದ ಎಲ್ಲ 50 ರಾಜ್ಯಗಳು ಒಂದಿಲ್ಲೊಂದು ರೀತಿಯಲ್ಲಿ ಕೊರೊನಾ ಕಂಟಕದಿಂದ ನರಳುವಂತಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಈ ಹೆಮ್ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮುಂದುವರಿಸಿದೆ. ಈ ಮಧ್ಯೆ, ಶ್ವೇತಭವನದಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಕಿಲ್ಲರ್ ಕೊರೊನಾ ನಿರ್ಮೂಲನೆಗಾಗಿ ಲಸಿಕೆ ಅನ್ವೇಷಣೆಯ ಅತ್ಯಂತ ನಿಕಟ ಹಂತದಲ್ಲಿ ಅಮೆರಿಕ ಇರುವುದಾಗಿ ತಿಳಿಸಿದ್ದಾರೆ

Facebook Comments

Sri Raghav

Admin