ಆ.15ರೊಳಗೆ ದೇಶದ ಮೊದಲ ಕೋವಿಡ್ ಲಸಿಕೆ ಬಿಡುಗಡೆಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.3- ದೇಶದಲ್ಲಿ ಕೋವಿಡ್ ವೈರಸ್ ಹಾವಳಿ ಆಘಾತಕಾರಿ ಮಟ್ಟದಲ್ಲಿ ಉಲ್ಬಣಗೊಂಡು ಸೋಂಕು ಮತ್ತು ಸಾವು ವ್ಯಾಪಕವಾಗುತ್ತಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಆ.15ರ ಸ್ವಾತಂತ್ರ್ಯ ದಿನಾಚರಣೆ ಒಳಗೆ ಶತಾಯ-ಗತಾಯ ದೇಶದ ಪ್ರಥಮ ಕೊರೊನಾ ವೈರಸ್ ನಿಗ್ರಹ ಲಸಿಕೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಈ ಸಂಬಂಧ ಭಾರತ್ ಬಯೋಟೆಕ್ ಇಂಟರ್‍ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಐಸಿಎಂಆರ್ ಜತೆ ಈ ನಿಟ್ಟಿನಲ್ಲಿ ಕೈ ಜೋಡಿಸಿದೆ.  ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಈಗಾಗಲೇ ಸಂಶೋಧನೆ ಅಭಿವೃದ್ಧಿಯಲ್ಲಿರುವ ವೈರಸ್‍ವೊಂದರ ಮೇಲೆ ನಡೆಸಲಾದ ಅಧ್ಯಯನವೊಂದನ್ನು ಆಧರಿಸಿ ಬಿಬಿಐಎಲ್ ಹೊಸ ಲಸಿಕೆಯೊಂದನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಂಡಿದೆ.

ಇದೇ ಉದ್ದೇಶಕ್ಕಾಗಿ ದೇಶದ 12 ಪ್ರಮುಖ ವೈದ್ಯಕೀಯ ಸಂಸ್ಥೆಗಳ ನೆರವು ಕೋರಿದ್ದು, ಆಯಾ ಕೇಂದ್ರಗಳಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ನಿಗ್ರಹ ಕುರಿತ ಪ್ರಯೋಗ ಮತ್ತು ಸಂಶೋಧನೆಯನ್ನು ಮತ್ತಷ್ಟು ತೀವ್ರಗೊಳಿಸಿ ಆಗಸ್ಟ್ 15ರೊಳಗೆ ಪರಿಣಾಮಕಾರಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುವಂತೆ ಐಸಿಎಂಆರ್ ಸೂಚನೆ ನೀಡಿದೆ.

ಈವರೆಗೆ ದೇಶದ ವಿವಿಧೆಡೆ ಅಭಿವೃದ್ಧಿಗೊಳಿಸಲಾಗಿರುವ ಕೋವಿಡ್-19 ವೈರಸ್ ನಿಗ್ರಹ ಔಷಧಿಗಳು ರೋಗ-ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಾತ್ರ ಪರಿಣಾಮಕಾರಿಯಾಗಿದ್ದು, ಪಿಡುಗು ನಿವಾರಣೆಗೆ ಸಾಕಷ್ಟು ಪ್ರಬಲವಾಗಿಲ್ಲ.

ಈ ಎಲ್ಲ ಅಂಶಗಳನ್ನೂ ಪರಿಗಣಿಸಿರುವ ಐಸಿಎಂಆರ್ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ದೇಶದ ಜನತೆಗೆ ಅತ್ಯಂತ ಪರಿಣಾಮಕಾರಿ ಮತ್ತು ಪ್ರಬಲ ಕೊರೊನಾ ವೈರಸ್ ನಿಗ್ರಹ ಲಸಿಕೆಯೊಂದನ್ನು ಅಭಿವೃದ್ಧಿಗೊಳಿಸುವಲ್ಲಿ ತಾನೇ ಗಡುವು ನಿಗದಿಪಡಿಸಿಕೊಂಡಿದೆ. ಇದು ದೇಶದ ಪ್ರಥಮ ಅಧಿಕೃತ ಲಸಿಕೆಯಾಗಲಿದೆ.

Facebook Comments