ಸಿಎಂ ಬೊಮ್ಮಾಯಿಗೆ ಎದುರಾಯ್ತು ನಿಗಮ-ಮಂಡಳಿ ಪುನರ್ ರಚನೆ ಸಂಕಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.4- ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ತಿಂಗಳಿನಲ್ಲೇ ನಿಗಮ-ಮಂಡಳಿ ಎನ್ನುವ ಜೇನುಗೂಡಿಗೆ ಕೈಹಾಕುವ ಸಂದಿಗ್ಧ ಸ್ಥಿತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿದೆ.ಯಾವುದೇ ರೀತಿಯ ಅಸಮಾಧಾನ ಉಂಟಾಗಗದಂತೆ ಸಂಪುಟ ರಚನೆ ಮಾಡುವಲ್ಲಿ ಸಫಲರಾಗಿರುವ ಬೊಮ್ಮಾಯಿ ಅವರಿಗೆ ಇದೀಗ ನಿಗಮ-ಮಂಡಳಿ ಪುನರ್ ರಚನೆ ಮಾಡುವಂತೆ ಪಕ್ಷದಿಂದ ಸೂಚನೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸರಳ ಆಡಳಿತದ ಮೂಲಕ ಜನತೆ ಹಾಗೂ ಹೈಕಮಾಂಡ್ ಗಮನ ಸೆಳೆಯುವಲ್ಲಿ ಸಫಲರಾಗಿರುವ ಬೊಮ್ಮಾಯಿಗೆ ಹೊಸ ಸವಾಲು ಎದುರಾಗಿದೆ.ನಿಗಮ-ಮಂಡಳಿಗಳಲ್ಲಿ ಸಂಘ ಪರಿವಾರದ ಹಿನ್ನೆಲೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಮಣೆ ಹಾಕಬೇಕು. ಮುಂಬರಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನೇಮಕಾತಿ ಮಾಡಬೇಕು ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.

ಹೀಗಾಗಿ ಯಡಿಯೂರಪ್ಪ ಅವಯಲ್ಲಿ ನೇಮಕಗೊಂಡಿರುವ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಬೇಕಾಗಿದೆ.ಈ ಸಂಬಂಧ ಸೂಚ್ಯವಾಗಿ ಕೆಲ ಸೂಚನೆಯನ್ನೂ ನಿಗಮ-ಮಂಡಳಿ ಅಧ್ಯಕ್ಷರಿಗೆ ಸಿಎಂ ರವಾನಿಸಿದ್ದಾರೆ.

ಬಿಎಸ್‍ವೈ ಬೆಂಬಲಿಗರಿಗೆ ನಿಗಮ-ಮಂಡಳಿಯಲ್ಲಿ ಹೆಚ್ಚಿನ ಅವಕಾಶ ಹಾಗೂ ಪ್ರಾತಿನಿಧ್ಯ ನೀಡಲಾಗಿದೆ. ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನ, ಅತೃಪ್ತಿ ಶಮನಕ್ಕೆ ಹಿರಿಯ ಶಾಸಕರಿಗೆ ನಿಗಮ-ಮಂಡಳಿ ಹಂಚಿಕೆ ಮಾಡಲಾಗಿತ್ತು. ಆದರೆ ಈಗ ಅವರೆಲ್ಲ ಸ್ಥಾನ ಕಳೆದುಕೊಳ್ಳುವ ಭೀತಿಯಿಂದಾಗಿ ಯಡಿಯೂರಪ್ಪ ಅವರ ಮನೆ ಬಾಗಿಲು ತಟ್ಟಿದ್ದಾರೆ.

ಬೆಂಬಲಿಗರ ಮನವಿ ಆಲಿಸಿರುವ ಬಿಎಸ್‍ವೈ ಆಪ್ತರಿಗೆಲ್ಲ ಭರವಸೆ ನೀಡಿ ಕಳುಹಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಯಲ್ಲೂ ಮಾತುಕತೆ ನಡೆಸಿ ಎಲ್ಲಾ ನಿಗಮ-ಮಂಡಳಿ ನೇಮಕಾತಿ ಬದಲಾವಣೆ ಮಾಡಬೇಡಿ. ಕೆಲವೊಂದು ಬದಲಾವಣೆ ಇದ್ದಲ್ಲಿ ಮಾತ್ರ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಕೇಂದ್ರಿತ ನಿಗಮ-ಮಂಡಳಿಗಳ ನೇಮಕಾತಿಯನ್ನು ಪಕ್ಷ ಕೇಂದ್ರಿತ ವ್ಯವಸ್ಥೆಗೆ ತರಬೇಕು ಎನ್ನುವ ಚಿಂತನೆಯೊಂದಿಗೆ ಆರ್‍ಎಸ್‍ಎಸ್ ಕಚೇರಿಯಿಂದ ಬಂದ ನಿರ್ದೇಶನದಂತೆ ರಾಜ್ಯ ಬಿಜೆಪಿ ನಾಯಕರು ಸಿಎಂ ಬಸವರಾಜ ಬೊಮ್ಮಾಯಿಗೆ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಬೇಕು ಎಂದು ಸಂದೇಶ ಕಳುಹಿಸಿದ್ದಾರೆ.

ಹೈಕಮಾಂಡ್ ಕೂಡ ಇದಕ್ಕೆ ಸಹಮತ ನೀಡಿದೆ. ಹೀಗಾಗಿ ನಿಗಮ-ಮಂಡಳಿ ಪುನಾರಚನೆ ಮಾಡಬೇಕಾದ ಒತ್ತಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಲುಕಿದ್ದಾರೆ. ಇರುವವರನ್ನು ಬದಲಿಸಲು ಹೊರಟರೆ ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ.

ಬದಲಿಸದೆ ಹೋದಲ್ಲಿ ಸಂಘ ಪರಿವಾರದ ಪ್ರಮುಖರು, ಹೈಕಮಾಂಡ್ ನಾಯಕರ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ. ಅಲ್ಲದೆ, ನಿಗಮ-ಮಂಡಳಿಗೆ ಹೊಸದಾಗಿ ನೇಮಕಾತಿ ಮಾಡಿದಲ್ಲಿ ಅಸಮಾಧಾನ ಸೋಟಗೊಳ್ಳುವ ಆತಂಕವೂ ಇದೆ. ಹೀಗಾಗಿ ನಿಗಮ-ಮಂಡಳಿಗಳಿಗೆ ಪುನರ್ ನೇಮಕ ಮಾಡುವ ವಿಷಯ ಸಿಎಂ ಬೊಮ್ಮಾಯಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ನುಂಗಲೂ ಆಗದೆ, ಉಗುಳಲೂ ಆಗದ ಸ್ಥಿತಿಯನ್ನು ಎದುರಿಸುವಂತಾಗಿದೆ.

# ಸ್ಥಾನ ಕಳೆದುಕೊಳ್ಳುವ ಆತಂಕ:
ನಾಯಕತ್ವ ಬದಲಾವಣೆ ನಂತರ ರಾಜ್ಯದ 98 ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ನಾಮ ನಿರ್ದೇಶನಗೊಂಡಿರುವ 116 ನಿರ್ದೇಶಕರು ಮತ್ತು ಸದಸ್ಯರಿಗೆ ಇದೀಗ ಸ್ಥಾನ ಕಳೆದುಕೊಳ್ಳುವ ಆತಂಕ ಶುರುವಾಗಿದೆ.

ಆದರೆ, ಏಕಾಏಕಿ ಎಲ್ಲರ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ಒಪ್ಪಿಗೆ ಅಗತ್ಯವಿದ್ದು, ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin