ನಿಗಮ ಮಂಡಳಿಗೆ ಪಕ್ಷ ನಿಷ್ಠರನ್ನು ನೇಮಿಸಲು ಮುಂದಾದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.29- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾಯಿಸಿ ಹೊಸದಾಗಿ ನೇಮಕ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ತೀರ್ಮಾನಿಸಿದ್ದಾರೆ. ಮುಂದಿನ ವಾರ ನವದೆಹಲಿಗೆ ತೆರಳಲಿರುವ ಅವರು ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ನಿಗಮ ಮಂಡಳಿಗೆ ಪಕ್ಷ ನಿಷ್ಠರನ್ನು ನೇಮಕ ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಇತರೆ ಮುಖಂಡರೊಂದಿಗೆ ಚರ್ಚಿಸುವ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ನೇಮಕಾತಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ನಿಗಮ ಮಂಡಳಿಗೆ ತಮ್ಮ ಹಿಂಬಾಲಕರು ಹಾಗೂ ಆಪ್ತರನ್ನು ನೇಮಕ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪಕ್ಷ ನಿಷ್ಠರನ್ನು ಕಡೆಗಣಿಸಿ ತಮ್ಮವರಿಗೆ ನಿಗಮ ಮಂಡಳಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ ಎಂದು ಪಕ್ಷದ ಮೂಲ ಕಾರ್ಯಕರ್ತರ ಕೆಂಪಾಗಿತ್ತು. ಇದೀಗ ಬದಲಾದ ವ್ಯವಸ್ಥೆಯಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ನಿಗಮಮಂಡಳಿಗೆ ಹೊಸದಾಗಿ ಅಧ್ಯಕ್ಷರ ನೇಮಕಾತಿ ನಡೆಯಲಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರು, ನಿರ್ದೇಶಕರು, ಸದಸ್ಯರಾಗಿದ್ದವರಿಗೆ ಈಗ ತಮ್ಮ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕುಂದಗೋಳ ಕ್ಷೇತ್ರದ ಮಾಜಿ ಶಾಸಕರಾಗಿರುವ ಚಿಕ್ಕನಗೌಡ್ರು, ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಈ ಹಿಂದೆ ರಾಮನಗರ ಜಿಲ್ಲಾ ಘಟಕ ಅಧ್ಯಕ್ಷರಾಗಿದ್ದ ರುದ್ರೇಶ್, ಹಿಂದೆ ರಾಮನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿ ಪರಾಭವಗೊಂಡಿದ್ದರು. ಬಿ.ವೈ. ವಿಜಯೇಂದ್ರ ಆಪ್ತರಾದ ತಮ್ಮೇಶಗೌಡ ಅವರನ್ನು ಕವಿಕಾ ಅಧ್ಯಕ್ಷರಾಗಿ ನೇಮಿಸಲಾಗಿತ್ತು.

ಈ ಹಿಂದೆ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗದಿಂದಲೇ 9 ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಿದ್ದರು. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಎಂಎಸ್‍ಐಎಲ್ ಅಧ್ಯಕ್ಷ ಎಚ್ ಹಾಲಪ್ಪ, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ರಾಜ್ಯ ಆರ್ಯವೈಶ್ಯ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷ ರೇವಣಪ್ಪ, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್, ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ದಿ ಪ್ರಾಕಾರದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಅಕಾರದಲ್ಲಿದ್ದರು.

ಇವರಲ್ಲದೆ ರಾಜ್ಯದೆಲ್ಲೆಡೆಯ 98 ನಿಗಮ ಮಂಡಳಿಗಳು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಜಿಲ್ಲೆಯ ಒಟ್ಟಾರೆ 116 ಜನ ನಿರ್ದೇಶಕರು ಮತ್ತು ಸದಸ್ಯರಾಗಿ ನೇಮಕಗೊಂಡಿದ್ದರು. ಇವರೆಲ್ಲರ ಸ್ಥಾನಗಳು ಮತ್ತು ನಾಮನಿರ್ದೇಶನಗಳು ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದೀಗ ಈ ಎಲ್ಲ ನಿಗಮ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳನ್ನು ರದ್ದುಪಡಿಸಿ ಹೊಸದಾಗಿ ನೇಮಕ ಮಾಡಲು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

# ಬೊಮ್ಮಾಯಿಗೂ ಸವಾಲು:
ಯಾವುದೇ ರೀತಿಯ ಅಸಮಾಧಾನ ಉಂಟಾಗಗದಂತೆ ಸಂಪುಟ ರಚನೆ ಮಾಡುವಲ್ಲಿ ಸಫಲರಾಗಿರುವ ಬೊಮ್ಮಾಯಿ ಅವರಿಗೆ ಇದೀಗ ನಿಗಮ-ಮಂಡಳಿ ಪುನರ್ ರಚನೆ ಮಾಡುವಂತೆ ಪಕ್ಷದಿಂದ ಸೂಚನೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸರಳ ಆಡಳಿತದ ಮೂಲಕ ಜನತೆ ಹಾಗೂ ಹೈಕಮಾಂಡ್ ಗಮನ ಸೆಳೆಯುವಲ್ಲಿ ಸಫಲರಾಗಿರುವ ಬೊಮ್ಮಾಯಿ ಅವರಿಗೆ ಹೊಸ ಸವಾಲು ಎದುರಾಗಿದೆ.

ನಿಗಮ-ಮಂಡಳಿಗಳಲ್ಲಿ ಸಂಘ ಪರಿವಾರದ ಹಿನ್ನೆಲೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಮಣೆ ಹಾಕಬೇಕು. ಮುಂಬರಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನೇಮಕಾತಿ ಮಾಡಬೇಕು ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.

ಹೀಗಾಗಿ ಯಡಿಯೂರಪ್ಪ ಅವಯಲ್ಲಿ ನೇಮಕಗೊಂಡಿರುವ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಬೇಕಾಗಿದೆ. ಈ ಸಂಬಂಧ ಸೂಚ್ಯವಾಗಿ ಕೆಲ ಸೂಚನೆಯನ್ನೂ ನಿಗಮ-ಮಂಡಳಿ ಅಧ್ಯಕ್ಷರಿಗೆ ಸಿಎಂ ರವಾನಿಸಿದ್ದಾರೆ.

 

Facebook Comments