ಉಪಚುನಾವಣೆ ನಂತರ ನಿಗಮ ಮಂಡಳಿಯಲ್ಲಿ ಬಿಎಸ್‍ವೈ ಬೆಂಬಲಿಗರಿಗೆ ಕೊಕ್, ಹೊಸಬರಿಗೆ ಮಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.25-ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿಯುತ್ತಿದ್ದಂತೆ ನಿಗಮ ಮಂಡಳಿಗಳ ಅಧ್ಯಕ್ಷ- ಉಪಾಧ್ಯಕ್ಷರ ಬದಲಾವಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಜರ್ ಸರ್ಜರಿ ಮಾಡಲಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಬಿಎಸ್‍ವೈ ಬೆಂಬಲಿಗರಿಗೆ ಕೊಕ್ ನೀಡಿ ಹೊಸಬರಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಅವಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ವಿಷಯದಲ್ಲಿ ಹೈಕಮಾಂಡ್ ಈಗ ರಂಗಪ್ರವೇಶ ಮಾಡಿದೆ. ಆಪ್ತರಿಗೆ ಬಿಎಸ್‍ವೈ ಮಣೆಹಾಕಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಇದೀಗ ಅವರ ಬದಲಾವಣೆಗೆ ಪಕ್ಷ ಸೂಚನೆ ನೀಡಿದೆ.

ಅದಕ್ಕಾಗಿ ಸಮಿತ್ನಿ ರಚನೆ ಮಾಡಿದ್ದು, ಸಮಿತಿಯ ಅಭಿಪ್ರಾಯ ಪಡೆದು ವರದಿ ಪರಿಶೀಲಿಸಿ ಬೊಮ್ಮಾಯಿ ಸರ್ಕಾರ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ಬದಲಾವಣೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿಗಮ-ಮಂಡಳಿಗಳಲ್ಲಿ ಸಂಘ ಪರಿವಾರದ ಹಿನ್ನೆಲೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಮಣೆ ಹಾಕಬೇಕು, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನೇಮಕಾತಿ ಮಾಡಬೇಕೆಂದು ಪಕ್ಷದ ಹೈಕಮಾಂಡ್ ಸಿಎಂ ಬೊಮ್ಮಾಯಿಗೆ ಸೂಚಿಸಿದೆ.

ಹೀಗಾಗಿ ಯಡಿಯೂರಪ್ಪ ಅವಯಲ್ಲಿ ನೇಮಕಗೊಂಡಿರುವ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಂದ ರಾಜೀನಾಮೆ ಪಡೆದು ಹೊಸದಾಗಿ ನೇಮಕಾತಿ ಮಾಡಲು ಸಿಎಂ ಮುಂದಾಗಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಕುಮಾರ್ ನಿಗಮ ಮಂಡಳಿಗಳಿಗೆ ಹೊಸದಾಗಿ ನೇಮಕ ಮಾಡುವ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ್ದು, ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯತ್ವ ಹೊಂದಿರುವ ಮೂವರು ನಾಯಕರ ಸಮಿತಿಯನ್ನು ರಚಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸದಸ್ಯರಾಗಿರುವ ಸಮಿತಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸಂಚಾಲಕರಾಗಿದ್ದಾರೆ. ಈ ಮೂರು ಜನರ ಸಮಿತಿ ಈಗಾಗಲೇ ಹೈಕಮಾಂಡ್ ನೀಡಿರುವ ಟಾಸ್ಕ್ ಪೂರ್ಣಗೊಳಿಸಿದೆ.ಒಂದೂವರೆ ವರ್ಷ ಪೂರ್ಣಗೊಳಿಸಿರುವ ಅಧ್ಯಕ್ಷ ಉಪಾಧ್ಯಕ್ಷರ ಬದಲಾವಣೆ ಕುರಿತು ಒಲವು ವ್ಯಕ್ತಪಡಿಸಿದೆ ಎನ್ನಲಾಗಿದೆ.

ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವ ಅಧ್ಯಕ್ಷರಿಗೂ ಕೊಕ್ ನೀಡಲಾಗುತ್ತದೆ ಎನ್ನಲಾಗಿದೆ. ಸದ್ಯದಲ್ಲೇ ವರದಿ ಸಿಎಂ ಬಸವರಾಜ ಬೊಮ್ಮಾಯಿ ಕೈಸೇರಲಿದ್ದು, ಯಾರಿಗೆಲ್ಲಾ ಕೊಕ್ ನೀಡಲಾಗುತ್ತದೆ ಎನ್ನುವುದು ಬಹಿರಂಗವಾಗಲಿದೆ. ಯಡಿಯೂರಪ್ಪ ಕೇಂದ್ರಿತ ನಿಗಮ-ಮಂಡಳಿಗಳನ್ನು ಪಕ್ಷ ಕೇಂದ್ರಿತ ವ್ಯವಸ್ಥೆಗೆ ತರಬೇಕು ಎನ್ನುವ ಚಿಂತನೆಯೊಂದಿಗೆ ಆರ್ ಎಸ್ ಎಸ್ ಕಚೇರಿಯಿಂದ ಬಂದ ನಿರ್ದೇಶನದಂತೆ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ನಿಗಮ ಮಂಡಳಿ ನೇಮಕಾತಿ ಪುನರ್ ರಚನೆ ಪ್ರಸ್ತಾಪವಿರಿಸಿದ್ದು, ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಏಕಾಏಕಿ ಬದಲಾವಣೆಗೆ ಮುಂದಾದಲ್ಲಿ ಯಡಿಯೂರಪ್ಪ ವಿರೋಧ ಕಟ್ಟಿಕೊಳ್ಳಬೇಕಾಗಲಿದೆ ಎನ್ನುವ ಕಾರಣಕ್ಕೆ ತ್ರಿಸದಸ್ಯ ಸಮಿತಿ ರಚನೆಯ ಮೊರೆ ಹೋಗಲಾಗಿದೆ ಎನ್ನುವ ಮಾತುಗಳು ಹೇಳಲಾಗುತ್ತಿದೆ. ಸದ್ಯ ರಾಜ್ಯದ 98 ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ನಾಮ ನಿರ್ದೇಶನಗೊಂಡಿರುವ 116 ನಿರ್ದೇಶಕರು ಮತ್ತು ಸದಸ್ಯರಿದ್ದು, ಇವರಲ್ಲಿ ಒಂದೂವರೆ ವರ್ಷ ಪೂರ್ಣಗೊಳಿಸಿದವರನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಉಪಚುನಾವಣೆ ಮುಗಿಯುತ್ತಿದ್ದಂತೆ ನಿಗಮಮಂಡಳಿ ನೇಮಕಾತಿ ವಿಷಯದ ಕಡೆ ಗಮನ ಹರಿಸಲಿದ್ದಾರೆ.

Facebook Comments