ಭ್ರಷ್ಟ ಅಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಿ : N.R.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25-ಸಾಕಷ್ಟು ಅವ್ಯವಹಾರ ನಡೆಸಿರುವ ಎನ್.ಎಸ್.ರೇವಣ್ಣ ಎಂಬ ಅಧಿಕಾರಿ ಮೂರು ಹುದ್ದೆಯಲ್ಲಿ ಮುಂದುವರೆದಿರುವುದನ್ನು ಪತ್ತೆ ಹಚ್ಚಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಕೂಡಲೆ ತಪ್ಪಿತಸ್ಥರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿ ಪಶ್ಚಿಮ ವಲಯ ಯೋಜನೆ ವಿಭಾಗದ ಕಾರ್ಯಪಾಲಕ ಅಭಿಯಂತರ ಹುದ್ದೆಯಲ್ಲಿರುವ ರೇವಣ್ಣ ಎಂಬಾತ ಕಾಟನ್‍ಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪ್ರಭಾರಿ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಕಲಿ ಬಿಲ್ ಹಗರಣದಲ್ಲಿ ರೇವಣ್ಣ ಭಾಗಿಯಾಗಿರುವ ಬಗ್ಗೆ ಟಿವಿಸಿಸಿ ವರದಿ ನೀಡಿದೆ. ಅಲ್ಲದೆ ರೇವಣ್ಣ ಅವರು ಇನ್ನಿತರ ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಮೂರು ಹುದ್ದೆಯಲ್ಲಿ ಮುಂದುವರೆಸಿರುವ ಅವಶ್ಯಕತೆ ಏನಿತ್ತು ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಒಬ್ಬ ಅಧಿಕಾರಿ ಹಲವಾರು ಗುರುತರ ಆರೋಪ ಎದುರಿಸುತ್ತಿದ್ದರೂ ಅವರನ್ನು ಬಿಬಿಎಂಪಿಯಲ್ಲಿ ಮುಂದುವರೆಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದರಿಂದ ಕೂಡಲೇ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಅವರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments