ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಜೋರಾಗಿದೆ ಆಣೆ-ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಪರಿಷತ್ ಚುನಾವಣೆಯ ಪ್ರಚಾರದ ಕಾವು ಜೋರಾಗಿದೆ. ಅತ್ತ ಪಕ್ಷಗಳ ನಾಯಕರು ಬಹಿರಂಗ ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ಇತ್ತ ಸ್ಥಳೀಯ ನಾಯಕರು ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸಿದ್ದಾರೆ. ಚಿಂತಕರ ಚಾವಡಿ, ಬುದ್ಧಿವಂತರ ತಾಣ ಎಂದೇ ಹೆಸರುವಾಸಿಯಾಗಿದ್ದ ಮೇಲ್ಮನೆ ಕೋಟಿ ಕುಳಗಳ ತಾಣವಾಗಿ ಪರಿಣಮಿಸಿದೆ. ಹಾಗಾಗಿ ಪ್ರಸಕ್ತ ಚುನಾವಣೆ ಭಾರಿ ಕಾಸ್ಟ್ಲಿ ಆಗಿದೆ.

ಪ್ರಚಾರದ ಸಭೆ ಪ್ರತಿದಿನ ಕಾರ್ಯಕರ್ತರ ಖರ್ಚು ವೆಚ್ಚದ ಜೊತೆಗೆ ಮತದಾರರಿಗೆ ಲಕ್ಷಗಟ್ಟಲೇ ಹಣ ನೀಡಬೇಕಾಗಿದೆ. ಚುನಾವಣಾ ಆಯೋಗ ಯಾವುದೇ ಮಿತಿ ಹೇರದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಹಣವನ್ನು ಅಭ್ಯರ್ಥಿಗಳು ವ್ಯಯಿಸುತ್ತಿದ್ದಾರೆ. ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ 500, 1000 ರೂ. ನೀಡುತ್ತಿದ್ದರು. ಆದರೆ, ಗ್ರಾಮ ಪಂಚಾಯ್ತಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸದಸ್ಯರುಗಳಿಂದ ಆಯ್ಕೆಯಾಗಲಿರುವ ವಿಧಾನ ಪರಿಷತ್ ಸದಸ್ಯರ ಈ ಚುನಾವಣೆಗೆ ಈಗ ಭಾರಿ ಡಿಮ್ಯಾಂಡ್! 50 ಸಾವಿರದಿಂದ 1 ಲಕ್ಷ, ಕೆಲವೆಡೆ 2 ಲಕ್ಷದವರೆಗೆ ಕೊಟ್ಟು ಮತ ಪಡೆಯುವ ಪ್ರಯತ್ನಗಳು ನಡೆದಿವೆ.

ತಮ್ಮ ಮತಗಳನ್ನು ಖಚಿತಪಡಿಸಿಕೊಳ್ಳಲು ಪಕ್ಷಗಳ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಏಜಂಟರುಗಳ ಮೂಲಕ ಹಣ ತಲುಪಿಸುವ ವ್ಯವಸ್ಥೆ ಮಾಡಿರುವುದಲ್ಲದೆ ಮತದ ಗ್ಯಾರಂಟಿಗೆ ಆಣೆ-ಪ್ರಮಾಣದ ಮೊರೆ ಹೋಗಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಮಹಿಳೆಯರದ್ದೇ ಪಾರುಪತ್ಯ. 96 ಸಾವಿರ ಮತದಾರರ ಪೈಕಿ 51 ಸಾವಿರದಷ್ಟು ಮಹಿಳಾ ಮತದಾರರೇ ಇದ್ದಾರೆ.

ಈಗ ಅವರ ಮತ ಪಡೆಯಬೇಕಾದರೆ ಅವರ ಪತಿ ಹಾಗೂ ಕುಟುಂಬದ ಮೇಲೆ ವಿವಿಧ ಪ್ರಭಾವಗಳನ್ನು ಬೀರಬೇಕಾಗಿದೆ. ಮಹಿಳಾ ಮತದಾರರ ವೋಟಿಗೆ ಈಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ಮಹಿಳೆಯರೇ ಇದ್ದಾರೆ. ವಿವಿಧ ಪಕ್ಷಗಳ ಬೆಂಬಲ ಪಡೆದು ಅಧ್ಯಕ್ಷ ಉಪಾಧ್ಯಕ್ಷರಾದವರು ಈಗ ಪಕ್ಷ ನಿಷ್ಟೆಯಿಂದ ದೂರವೇ ಉಳಿದಿದ್ದಾರೆ. ಇವರ ಮನವೊಲಿಕೆಗೆ ನಾನಾ ಕಸರತ್ತುಗಳನ್ನು ನಡೆಸಲಾಗಿದೆ.

ಜನಪ್ರತಿನಿಗಳ ಮತಯಾಚನೆ ಸಂದರ್ಭದಲ್ಲಿ ಸಂಪೂರ್ಣ ಕುಟುಂಬವನ್ನು ಕೂರಿಸಿಕೊಂಡು ಹಣ ಮತ್ತಿತರ ವಸ್ತುಗಳನ್ನು ನೀಡಿ ಮಹಿಳೆಯರ ಮತಗಳನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಮೇಲ್ಮನೆ ಚುನಾವಣೆಯಲ್ಲಿ ಕಾಂಚಾಣದ ಸದ್ದು ಜೋರಾಗಿಯೇ ಕೇಳಿಸುತ್ತಿದೆ. ಬಾಡೂಟ ಪಾರ್ಟಿಗಳು ಹೆಚ್ಚಾಗಿ ನಡೆಯುತ್ತಿವೆ. ಮತದಾರರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ತೋಟದ ಮನೆ, ರೆಸಾರ್ಟ್, ಹೊಮ್‍ಸ್ಟೇ, ಲಾಡ್ಜ್‍ಗಳಲ್ಲಿ ಭಾರಿ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ.

ಇದಲ್ಲದೆ ಹಲವೆಡೆ ಗ್ರಾಪಂ ಸದಸ್ಯರನ್ನು ವಿಶೇಷವಾಗಿ ಮಹಿಳಾ ಸದಸ್ಯರನ್ನು ವಿವಿಧೆಡೆ ಪ್ರಚಾರಕ್ಕೆ ಕಳುಹಿಸಿ ಕೊಡಲಾಗುತ್ತಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಗೆಲುವಿನ ಹಾದಿ ಸುಗಮ ಇರುವ ಕಡೆ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಯಾವುದೇ ಪಕ್ಷವಾದರೂ ಹಣವಿಲ್ಲದೆ ಈ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಯಾವ ಪಕ್ಷದವರು ಎಷ್ಟು ಕೊಡುತ್ತಾರೆ ಎಂಬುದನ್ನು ತಿಳಿದು ಅದಕ್ಕಿಂತ ಹೆಚ್ಚು ಕೊಟ್ಟು ಗೆಲುವನ್ನು ತಮ್ಮದಾಗಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ನಡೆಸಿದ್ದಾರೆ.

ಗ್ರಾಮ ಪಂಚಾಯ್ತಿ ಸದಸ್ಯರು ಯಾವುದೇ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿಲ್ಲ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ನಮಗೆ ಮತ ನೀಡುತ್ತೇವೆ ಎಂದು ಭರವಸೆ ನೀಡಿದರೂ ಕೂಡ ಖಚಿತವಿಲ್ಲ. ಚುನಾಯಿತರು ಪಕ್ಷದ ಬೆಂಬಲಿಗರಾಗಿದ್ದರೂ ಕೂಡ ಹಣ ಅವರಿಗೆ ಸೇರಲೇಬೇಕು. ಹೀಗಾಗಿ ಹಣ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಯಾರು ಹೆಚ್ಚು ಕೊಡುತ್ತಾರೆಯೇ ಅವರಿಗೆ ಮತ ಹೋಗುತ್ತದೆ. ಅವರು ಗೆಲ್ಲುತ್ತಾರೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬಂದಿವೆ.

ಬಹುತೇಕರು ಗಿಫ್ಟ್‍ಗಳಿಗಿಂತ ಹಣವನ್ನೇ ಹೆಚ್ಚು ಬಯಸುತ್ತಿದ್ದಾರೆ. ನಿರಂತರ ಕಳೆದ ಎರಡು ವರ್ಷಗಳಿಂದ ಕೋವಿಡ್‍ನಿಂದ ಕಂಗೆಟ್ಟಿರುವ ಜನ ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡಿರುವ ಮಂದಿಗೆ ಈಗ ಪರಿಷತ್ ಚುನಾವಣೆ ವರವಾಗಿ ಪರಿಣಮಿಸಿದೆ.

Facebook Comments