15 ರಾಜ್ಯಗಳ 116 ಕ್ಷೇತ್ರಗಳಲ್ಲಿ 3ನೇ ಹಂತದ ಮತದಾನಕ್ಕೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.22-ಹದಿನೇಳನೇ ಲೋಕಸಭೆಗೆ ಸಂಸದರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಹೈವೋಲ್ಟೇಜ್ ಮಹಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಏ.23ರಂದು ವೇದಿಕೆ ಸಜ್ಜಾಗಿದೆ. ಈ ಹಂತದ ಚುನಾವಣೆಗಾಗಿ ನಿನ್ನೆ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 116 ಲೋಕಸಭಾ ಕ್ಷೇತ್ರಗಳಿಗೆ ನಾಳೆ ವ್ಯಾಪಕ ಬಿಗಿ ಭದ್ರತೆಯಲ್ಲಿ ಮತದಾನ ನಡೆಯಲಿದೆ. 1,600ಕ್ಕೂ ಹೆಚ್ಚು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ಬಹಿರಂಗ ಪ್ರಚಾರದ ಕೊನೆ ದಿನವಾದ ನಿನ್ನೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿ ಮತದಾರರನ್ನು ಓಲೈಸುವ ಕೊನೆ ನಿಮಿಷದ ಕಸರತ್ತು ನಡೆಸಿದರು.

ತೃತೀಯ ಹಂತದಲ್ಲಿ ಗುಜರಾತ್‍ನ 26, ಕೇರಳದ 20, ಕರ್ನಾಟಕ ಮತ್ತು ಮಹಾರಾಷ್ಟ್ರದ ತಲಾ 14, ಉತ್ತರ ಪ್ರದೇಶದ 10 ಛತ್ತೀಸ್‍ಗಢದ ಏಳು, ಓಡಿಶಾದ ಆರು, ಬಿಹಾರ ಮತ್ತು ಪಶ್ಚಿಮ ಬಂಗಾಳದ ತಲಾ ಐದು, ಅಸ್ಸಾಂನ ನಾಲ್ಕು, ಗೋವಾದ ಎರಡು, ಜಮ್ಮು ಮತ್ತು ಕಾಶ್ಮೀರ, ದಾದ್ರಾ ಮತ್ತು ನಗರ್ ಹವೇಲಿ, ಡಮನ್ ಮತ್ತು ದಿಯು ಹಾಗೂ ತ್ರಿಪುರಾದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ(ವಯನಾಡ್ ಕ್ಷೇತ್ರ)ದ ಪಕ್ಷಗಳ ಮುಖಂಡರು ಸ್ಫರ್ಧಾ ಕಣದಲ್ಲಿದ್ದಾರೆ. ನಾಳೆಯ ಮತದಾನಕ್ಕಾಗಿ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ದತೆಗಳನ್ನು ನಡೆಸಿದೆ. ವಿದ್ಯುನ್ಮಾನ ಮತ ಯಂತ್ರಗಳು(ಇಎಂಗಳು) ದೋಷಗಳು ಮರುಕಳಿಸದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‍ನಲ್ಲಿ 26 ಲೋಕಸಭಾ ಕ್ಷೇತ್ರಗಳೊಂದಿಗೆ ನಾಲ್ಕು ವಿಧಾನಸಭಾ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಒಟ್ಟು 4 ಕೋಟಿ 47 ಲಕ್ಷ ಮಂದಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಇವರಲ್ಲಿ 2.14 ಕೋಟಿ ಮಹಿಳಾ ಮತದಾರರು.

ಕರ್ನಾಟಕದಲ್ಲಿ ಮಂಗಳವಾರ ಎರಡನೇ ಮತ್ತು ಕೊನೆ ಹಂತದ ಚುನಾವಣೆ ನಡೆಯಲಿದೆ. 14 ಕ್ಷೇತ್ರಗಳಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದರು. ಏ.18ರಂದು ಕರ್ನಾಟಕ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿತ್ತು.

ಮೂರನೇ ಹಂತದ ಚುನಾವಣೆಗಾಗಿ 13 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉರಿ ಬಿಸಿಲನ್ನು ಲೆಕ್ಕಿಸದೇ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬೃಹತ್ ಚುನಾವಣಾ ಪ್ರಚಾರ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ನಿನ್ನೆ ಗುಜರಾತ್‍ನ ಪಟಾನ್‍ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ತೊಂಡು ಬಿಜೆಪಿ ಮತ್ತು ಮಿತ್ರ ಪಕ್ಷಗಳ ಪರ ಮತಚಲಾಯಿಸುವಂತೆ ಕೋರಿದರು. ನಂತರ ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶನಿವಾರ ಭದ್ರಾವತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪಪ್ಪ ಮತ್ತು ಎಸ್.ಎಸ್.ಕೃಷ್ಣ ಬಿಜೆಪಿ ಪರ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪರವಾಗಿ ಅಬ್ಬರದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ, ಛತೀಸ್‍ಗಢ ಮತ್ತು ಬಿಹಾರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಛತ್ತೀಸ್‍ಗಢದ ಬಿಲಾಸ್‍ಪುರದಲ್ಲಿ ಅವರು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಮಹಾ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಕೂಡು ಕೇರಳದ ವಯನಾಡಿನಲ್ಲಿ ತಮ್ಮ ಸಹೋದರ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರವಾಗಿ ಮತ ಯಾಚಿಸಿದರು.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಸ್ ಕುಮಾರ್, ಉತ್ತರ ಪ್ರದೇಶದ ವಿವಿಧೆಡೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಆರ್‍ಎಲ್‍ಡಿ ಅಧ್ಯಕ್ಷ ಅಜಿತ್ ಸಿಂಗ್ ವಿವಿಧೆಡೆ ಚುನಾವಣಾ ರ್ಯಾಲಿಗಳನ್ನು ನಡೆಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin