ಕುತೂಹಲ ಮೂಡಿಸಿದೆ ವಿಶ್ವಸಂಸ್ಥೆ ಮಹಾಅಧಿವೇಶನದ ಮೋದಿ ಭಾಷಣ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ/ನ್ಯೂಯಾರ್ಕ್, ಸೆ.26- ಭಯೋತ್ಪಾದನೆ ವಿರುದ್ಧ ಜಾಗತಿಕ ಕ್ರಮ, ವಿಶ್ವ ಮತ್ತು ಮನುಕುಲದ ಹಿತಾಸಕ್ತಿಗಾಗಿ ಪಂಚಮಂತ್ರಗಳ ಪ್ರತಿಪಾದನೆ ಹಾಗೂ ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲು ಮತ್ತು ಸಮಸ್ಯೆಗಳ ನಿವಾರಣೆಗೆ ಸಮಗ್ರ ಸುಧಾರಣೆ ಯೋಜನೆ- ಇವು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಸಂಸ್ಥೆಯ 75ನೆ ವಾರ್ಷಿಕೋತ್ಸವದ ಮಹಾ ಅಧಿವೇಶನದಲ್ಲಿ ಪ್ರಸ್ತಾಪಿಸಲಿರುವ ಪ್ರಮುಖ ವಿಷಯಗಳಾಗಿವೆ.

193 ಸದಸ್ಯ ರಾಷ್ಟ್ರಗಳ ಸಂಯುಕ್ತ ವೇದಿಕೆಯಾದ ವಿಶ್ವಸಂಸ್ಥೆಯ 75ನೆ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿ ಇಂದು ಸಂಜೆ ಮಹಾ ಅಧಿವೇಶನ (ಯುಎನ್‍ಜಿಎ)ದಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ವಿಶ್ವಸಂಸ್ಥೆಯ 75ನೆ ವರ್ಷಾಚರಣೆಯ ಸಾಮಾನ್ಯ ಸಭೆಯಲ್ಲಿ ಪ್ರಥಮ ಭಾಷಣಕಾರರಾಗಿ ಮೋದಿ ಮಾತನಾಡಲಿದ್ದು, ಅನೇಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ.

ಕೊರೊನಾ ವೈರಸ್ ಹಾವಳಿಯಿಂದಾಗಿ ಪ್ರಧಾನಮಂತ್ರಿ ಅವರು ಖುದ್ದಾಗಿ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಪೂರ್ವ ವಿಡಿಯೋ ಮುದ್ರಿತ ಭಾಷಣವನ್ನು ಮಹಾಧಿವೇಶನದಲ್ಲಿ ಪ್ರಸಾರ ಮಾಡಲಾಗುವುದು. ಜಗತ್ತು ಮತ್ತು ಮನುಕುಲಕ್ಕೆ ಕಂಟಕಪ್ರಾಯವಾಗಿರುವ ಭಯೋತ್ಪಾದನೆ ನಿಗ್ರಹಕ್ಕಾಗಿ ಜಾಗತಿಕ ಹೋರಾಟ ನಡೆಸಬೇಕೆಂಬ ಮಾತನ್ನು ಮೋದಿ ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ.

ವಿಶ್ವ ಮತ್ತು ಮನುಕುಲದ ಶಾಂತಿಗಾಗಿ 5-ಎಸ್ ಮಂತ್ರಗಳನ್ನು ಮೋದಿ ಪ್ರತಿಪಾದಿಸಲಿದ್ದಾರೆ. ಸಮ್ಮಾನ್ (ಗೌರವ), ಸಂವಾದ (ಸಂಭಾಷಣೆ), ಸಹಯೋಗ (ಸಹಕಾರ), ಶಾಂತಿ ಹಾಗೂ ಸಮೃದ್ಧಿ ಈ ಪಂಚ ಸೂತ್ರಗಳ ತತ್ವವನ್ನು ಇಡೀ ಜಗತ್ತು ಅನುಸರಿಸಿದಲ್ಲಿ ಲೋಕ ಕಲ್ಯಾಣವಾಗುತ್ತದೆ ಎಂಬ ಅಂಶವನ್ನು ಅವರು ತಮ್ಮ ಭಾಷಣದಲ್ಲಿ ವ್ಯಾಖ್ಯಾನಿಸಲಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್‍ಎಸ್‍ಸಿ) ಭಾರತ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಎರಡು ವರ್ಷಗಳ ಕಾಲ ಚುನಾಯಿತವಾಗಿದ್ದು, ಜನವರಿ 1ರಿಂದ ಕಾರ್ಯನಿರ್ವಹಿಸಲಿದೆ. ಈ ಹಿನ್ನೆಲೆಯಲ್ಲಿ ಈ ಅಂಗಸಂಸ್ಥೆಯಲ್ಲಿ ಭಾರತದ ಮಹತ್ವದ ಪಾತ್ರವನ್ನು ಸಹ ಮೋದಿ ತಮ್ಮ ಭಾಷಣದಲ್ಲಿ ಮಂಡಿಸಲಿದ್ದಾರೆ.

ವಿಶ್ವ ಪ್ರಸ್ತುತ ಎದುರಿಸುತ್ತಿರುವ ಕೊರೊನಾ ವೈರಸ್ ಹೆಮ್ಮಾರಿಯ ನಿಗ್ರಹಕ್ಕಾಗಿ ಇಡೀ ಜಗತ್ತು ಒಗ್ಗೂಡಿ ಹೋರಾಟ ನಡೆಸಿ ಈ ಪೀಡೆಯನ್ನು ನಿರ್ಮೂಲನೆಗೊಳಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ಕುರಿತು ನರೇಂದ್ರ ಮೋದಿ ಪ್ರಸ್ತಾಪಿಸಲಿದ್ದಾರೆ. ಮೊನ್ನೆ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಮೋದಿ, ಮನುಕುಲದ ಹಿತಾಸಕ್ತಿಗಾಗಿ ಸಮಗ್ರ ಸುಧಾರಣೆಗಳ ಅನುಷ್ಠಾನದ ಕೊರತೆಯನ್ನು ವಿಶ್ವಸಂಸ್ಥೆ ಎದುರಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ಲೋಕ ಕಲ್ಯಾಣಕ್ಕಾಗಿ ಕೆಲವು ಮಹತ್ವದ ಸಲಹೆಗಳನ್ನು ಮೋದಿ ನೀಡಿದ್ದರು.

ಇಂದಿನ ಮೋದಿ ಅವರ ಭಾಷಣವು ವಿಶ್ವಸಂಸ್ಥೆಯ 75ನೆ ವಾರ್ಷಿಕೋತ್ಸವದ ಮಹಾ ಅಧಿವೇಶನದಲ್ಲಿ ಎರಡನೆ ಮಹತ್ವದ ಭಾಷಣವಾಗಿದೆ. ಮೋದಿ ಅವರ ಈ ಭಾಷಣ ಇಡೀ ವಿಶ್ವದ ಗಮನ ಸೆಳೆಯಲಿದ್ದು, ಭಾರತದೊಂದಿಗೆ ವಿವಿಧ ಪ್ರಮುಖ ವಿಷಯಗಳಲ್ಲಿ ಬೆಂಬಲ ನೀಡಲು ಅನೇಕ ರಾಷ್ಟ್ರಗಳು ಉತ್ಸುಕವಾಗಿವೆ.

Facebook Comments