ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಬೆದರಿಸುತ್ತಿದ್ದವನ್ನು ಕೊಂದಿದ್ದ ದಂಪತಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ನಂದಿನಿ ಲೇಔಟ್ ಠಾಣೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಲಗ್ಗೆರೆಯ ನಿವಾಸಿ, ಆಟೋ ಚಾಲಕ ಮಂಜು ಅಲಿಯಾಸ್ ಮಗ (35) ಮತ್ತು ಈತನ ಪತ್ನಿ ಸಾವಿತ್ರಿ (28) ಬಂಧಿತ ದಂಪತಿ.

ನ.15ರಂದು ಮುಂಜಾನೆ 6.30ರ ಸುಮಾರಿನಲ್ಲಿ ಲಗ್ಗೆರೆಯ ಶಾಲೆಯೊಂದರ ಕಾಂಪೌಂಡ್ ಸಮೀಪ ಅನುಮಾನಾಸ್ಪದವಾಗಿ ಮೂಟೆಯೊಂದು ಪತ್ತೆಯಾಗಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸ್ ನಿಯಂತ್ರಣ ಕೋಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಮೂಟೆ ಬಿಚ್ಚಿ ನೋಡಿದಾಗ ಅದರಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿರುವುದು ಕಂಡುಬಂದಿತ್ತು.

ಸ್ಥಳೀಯರೊಬ್ಬರು ಶವವನ್ನು ನೋಡಿ ಕಾಳಿಂಗೇಗೌಡ ಎಂಬುವವರ ಮಗ ಸಂತೋಷ್ (31) ಎಂದು ಗುರುತಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಗನನ್ನು ಆತನ ಪತ್ನಿ ಯಮುನಾ ಮತ್ತು ಅತ್ತೆ ಶ್ಯಾಮಲಾ ಕೊಲೆ ಮಾಡಿಸಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಇವರುಗಳ ವಿರುದ್ಧ ಕ್ರಮ ಕೈಗೊಳ್ಳಲು ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‍ಪೆಕ್ಟರ್ ಲೋಹಿತ್ ತಮ್ಮ ಸಿಬ್ಬಂದಿಯೊಂದಿಗೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಲಗ್ಗೆರೆಯ ಆಟೋ ಚಾಲಕ ಮಂಜು ದಂಪತಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಕೊಲೆ ಸತ್ಯಾಸತ್ಯತೆ ಬಯಲಿಗೆ ಬಂದಿದೆ.

ಸಂತೋಷ್ ಆರೋಪಿಗಳಾದ ಮಂಜು ದಂಪತಿಗೆ ಸ್ನೇಹಿತನಾಗಿದ್ದು, ಮಂಜು ನಡೆಸುತ್ತಿದ್ದ ಚೀಟಿ ವ್ಯವಹಾರದಲ್ಲಿ ಈತನೂ ಚೀಟಿ ಹಾಕಿದ್ದನು. ಆಗಾಗ್ಗೆ ಚೀಟಿ ಹಣ ನೀಡುವಂತೆ ಪೀಡಿಸುತ್ತ ಮನೆಗೆ ಬಂದು ಹೋಗುತ್ತಿದ್ದನು. ಈ ನಡುವೆ ದಂಪತಿಯ ಖಾಸಗಿ ಪೋಟೋ ಮತ್ತು ವಿಡಿಯೋ ಮಾಡಿಕೊಂಡು ಎಲ್ಲರಿಗೂ ತೋರಿಸುತ್ತೇನೆ ಎಂದು ಬೆದರಿಸಿ ಹಣ ಪಡೆಯುತ್ತಿದ್ದ ಎಂದು ಪೊಲೀಸರ ಮುಂದೆ ಆರೋಪಿಗಳು ಹೇಳಿದ್ದಾರೆ.

ಸಂತೋಷ್ ನಾಲ್ಕೈದು ವರ್ಷಗಳಿಂದ ತಮ್ಮನ್ನು ಬೆದರಿಸಿ 4 ಲಕ್ಷ ರೂ. ಹಣ ಕಿತ್ತುಕೊಂಡಿದ್ದಾನೆ. ಅಲ್ಲದೆ, ತನ್ನ ಪತ್ನಿ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತು ಅಂದು ಆತನನ್ನು ಮನೆಗೆ ಕರೆಸಿಕೊಂಡು ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಚೀಲದಲ್ಲಿ ಹಾಕಿ ಯಾರಿಗೂ ಗೊತ್ತಾಗಬಾರದೆಂದು ಲಗ್ಗೆರೆಯ ಶಾಲೆಯೊಂದರ ಕಾಂಪೌಂಡ್ ಪಕ್ಕದಲ್ಲಿ ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

Facebook Comments