ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆದದ್ದೇನು..? 2 ಜೀವಗಳು ಹಾರಿ ಹೋಗಿದ್ದೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ರಸ್ತೆಯಲ್ಲಿ ರಾತ್ರಿ ಅಪಘಾತ ಉಂಟಾಗಿ ಕೆಳಗೆ ಬಿದ್ದು ಮೃತಪಟ್ಟಿರುವ ಯುವಕ ಹಾಗೂ ಯುವತಿಯ ಹೆಸರು ಪತ್ತೆಯಾಗಿದೆ.ಮಾರತಹಳ್ಳಿಯಲ್ಲಿ ವಾಸವಾಗಿದ್ದ ಪ್ರೀತಮ್‍ಕುಮಾರ್ (30) ಮತ್ತು ಚೆನೈ ನಿವಾಸಿ ಕೃತಿಕಾರಾಮ್ (28) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಸ್ನೇಹಿತರು. ಪ್ರೀತಮ್ ಕುಮಾರ್ ತಂದೆ ಜೆ.ಪಿ.ನಗರದಲ್ಲಿ ವಾಸವಾಗಿದ್ದಾರೆ. ಸರ್ಜಾಪುರ ರಸ್ತೆಯಲ್ಲಿರುವ  ನೊವೋಪೇ ಎಂಬ ಕಂಪೆನಿಯಲ್ಲಿ ಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಮ್ ಜೆ.ಪಿ.ನಗರದ 8ನೇ ಹಂತ ಅಕ್ಷಯ್ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು.

ಸ್ನೇಹಿತೆ ಕೃತಿಕಾರಾಮ್ ಮಹದೇವಪುರದಲ್ಲಿರುವ ಕಾಯಿನ್ ಸ್ವಿಚ್ ಎಂಬ ಕಂಪೆನಿಯಲ್ಲಿ ಟೀಮ್ ಲೀಡರ್ ಆಗಿ ನಾಲ್ಕೈದು ದಿನಗಳ ಹಿಂದಷ್ಟೇ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಪ್ರೀತಮ್ ಕುಮಾರ್ ತನ್ನ ಸ್ನೇಹಿತನ ಬುಲೆಟ್ ಬೈಕ್ ಪಡೆದು ಸ್ನೇಹಿತೆ ಕೃತಿಕಾರಾಮ್‍ರನ್ನು ಕರೆದುಕೊಂಡು ಜಾಲಿರೈಡ್‍ಗೆ ತೆರಳಿದ್ದರು. ರಾತ್ರಿ 9.20ರ ಸುಮಾರಿನಲ್ಲಿ ಎಲೆಕ್ಟ್ರಾನಿಕ್‍ಸಿಟಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲಿವೇಟೆಡ್ ಫ್ಲೈಓವರ್ ರಸ್ತೆಯಲ್ಲಿ ಸಿಲ್ಕ್‍ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುತ್ತಿದ್ದಾಗ ಅತಿ ವೇಗವಾಗಿ ಬಂದ ಬಲೆನೋ ಕಾರು ಇವರ ಬುಲೆಟ್ ಬೈಕ್‍ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಪ್ರೀತಮ್‍ಕುಮಾರ್ ಮತ್ತು ಕೃತಿಕಾ ಇಬ್ಬರೂ ಫ್ಲೈಓವರ್‍ನಿಂದ 30 ಅಡಿ ಎತ್ತರದಿಂದ ಹಾರಿ ಸುಮಾರು 150 ಅಡಿ ದೂರ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲೆಕ್ಟ್ರಾನಿಕ್‍ಸಿಟಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಸೆಂಟ್‍ಜಾನ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

# ಕಾರು ಚಾಲಕ ಗಾಯ:
ಅಪಘಾತದ ರಭಸಕ್ಕೆ ಕಾರು ಚಾಲಕ ನಿತೇಶ್(23) ಸಹ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಮ್ಮಸಂದ್ರದ ತಿರುಪಾಳ್ಯ ಗ್ರಾಮದ ನಿವಾಸಿ ನಿತೇಶ್ ಬಿಇ ವ್ಯಾಸಂಗ ಮಾಡುತ್ತಿದ್ದಾರೆ.

# ಅಪಘಾತದ ದೃಶ್ಯ ಭೀಕರ:
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಒಂದು ಕ್ಷಣ ಏನಾಯಿತೆಂದು ನೋಡುವಷ್ಟರಲ್ಲಿ ಫ್ಲೈಓವರ್‍ನಿಂದ ಯುವಕ-ಯುವತಿ ಮೇಲಕ್ಕೆ ಹಾರಿ ಕೆಳಗೆ ಬಿದ್ದು ಪ್ರಾಣಕಳೆದುಕೊಂಡ ಭೀಕರ ದೃಶ್ಯ ಎಂಥವರನ್ನೂ ನಡುಗಿಸುವಂತಿತ್ತು.

# ವಾಹನಗಳು ಜಖಂ: ಭೀಕರ ಅಪಘಾತದಿಂದಾಗಿ ಬುಲೆಟ್ ಬೈಕ್ ಭಾಗಶಃ ಹಾನಿಯಾಗಿದೆ. ಬೈಕ್‍ಗೆ ಕಾರು ಡಿಕ್ಕಿ ಹೊಡೆದು ನಂತರ ಎಲಿವೇಟರ್ ತಡೆ ಗೋಡೆಗೆ ಗುದ್ದಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

# ಏರ್‍ಬ್ಯಾಗ್‍ನಿಂದ ತಪ್ಪಿದ ಸಾವು: ಬೈಕ್‍ಗೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಿನ ಏರ್‍ಬ್ಯಾಗ್ ಓಪನ್ ಆಗಿದ್ದರಿಂದ ನಿತೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಸ್ಟೇರಿಂಗ್ ತುಂಡಾಗಿದೆ.

# ಪೆಟ್ರೋಲ್ ಖಾಲಿಯಿಂದಾಗಿ ಹೊಯ್ತಾ ಇಬ್ಬರ ಪ್ರಾಣ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಈ ಸ್ನೇಹಿತರು ಬುಲೆಟ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಪೆಟ್ರೋಲ್ ಖಾಲಿಯಾಗಿರಬಹುದು ಅಥವಾ ಬುಲೆಟ್ ಕೆಟ್ಟಿದ್ದರಿಂದ ಇವರಿಬ್ಬರು ನಿಂತಿರುವುದು ಗಮನಕ್ಕೆ ಬಾರದೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರಬಹುದೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಒಟ್ಟಾರೆ ಬೈಕ್‍ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದರಿಂದಲೇ ಹೋಯ್ತಾ ಇವರಿಬ್ಬರ ಪ್ರಾಣ ಹೋಗಿರಬಹುದು.

# ಅತಿವೇಗ: ಈ ಮಾರ್ಗದಲ್ಲಿ ನಿತೇಶ್ ಸುಮಾರು 120 ಕಿ.ಮೀ. ಸ್ಪೀಡ್‍ನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ತಕ್ಷಣ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೆ ಅಪಘಾತ ಸಂಭವಿಸಲು ಕಾರಣವಾಗಿದೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

# ಸಿಸಿ ಟಿವಿಯಲ್ಲಿ ಸೆರೆ: ಅಪಘಾತದ ಭೀಕರ ದೃಶ್ಯ ಈ ರಸ್ತೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಯಾವ ಕಾರಣಕ್ಕೆ, ಯಾವ ರೀತಿ ಈ ಭೀಕರ ಅಪಘಾತ ಸಂಬವಿಸಿರಬಹುದೆಂಬ ಬಗ್ಗೆ ನಿಖರ ಕಾರಣ ಪತ್ತೆಹಚ್ಚುತ್ತಿದ್ದಾರೆ.

ಒಟ್ಟಾರೆ ಒಂದು ಕಡೆ ಜಾಲಿರೈಡ್, ಮತ್ತೊಂದು ಕಡೆ ಕಾರಿನ ಅತಿವೇಗದ ಚಾಲನೆಯಿಂದಾಗಿ ಇಬ್ಬರು ಪ್ರಾಣಕಳೆದುಕೊಂಡಿರುವುದು ದುರಂತ. ಇತ್ತೀಚೆಗೆ ಅತಿವೇಗ ಚಾಲನೆಯಿಂದಾಗಿ ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ 7ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ನಗರದಲ್ಲಿ ರಾತ್ರಿ ಮತ್ತೊಂದು ಅಪಘಾತ ಸಂಭವಿಸಿ ಇಬ್ಬರು ಪ್ರಾಣಕಳೆದುಕೊಂಡಿರುವುದು ವಿಷಾದದ ಸಂಗತಿ. ಅಪಘಾತ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Facebook Comments