ದಂಪತಿಗಳನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ನಗ-ನಾಣ್ಯ ದೋಚಿ ಪರಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪೇಟೆ, ಜು.20- ಮನೆಗೆ ನುಗ್ಗಿ ದಂಪತಿಗಳನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಮನೆಯ ಬೀರುವಿನಲ್ಲಿದ್ದ ನಗ-ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ನಡೆದಿದೆ. ರಾಯಸಮುದ್ರ ಗ್ರಾಮದ ಕೂಲಿ ಕಾರ್ಮಿಕ ದಂಪತಿ ಗುಂಡೇಗೌಡ (55), ಅವರ ಪತ್ನಿ ಲಲಿತಮ್ಮ(45) ಹತ್ಯೆಯಾದ ದಂಪತಿ.

ಘಟನೆ ವಿವರ: ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಕೂಲಿ ಮಾಡಿ ಸಂಪಾದಿಸಿದ ಹಣವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಕಳೆದ ಶನಿವಾರ ಉಪವಾಸ ಹಬ್ಬದ ದಿನದಂದು ಹಬ್ಬ ಮಾಡಿದ್ದ ದಂಪತಿಗಳು ಭಾನುವಾರದಿಂದ ನಂತರ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದ ಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಕಂಡು ಬಂದಿತ್ತು.

ಆದರೆ, ಐದಾರು ದಿನಗಳಾದರೂ ಮನೆಯ ಬೀಗ ತೆಗೆಯದೆ ಇರುವುದಕ್ಕೆ ಅಕ್ಕಪಕ್ಕದ ಮನೆಯವರು ನೆಂಟರ ಮನೆಗೆ ಹೋಗಿರಬಹುದೆಂದು ಅನುಮಾನಗೊಂಡಿದ್ದರು. ಎಲ್ಲಿಗೆ ಹೋದರೂ ಎರಡು ದಿನಗಳಲ್ಲಿ ಮರಳಿ ಬರುತ್ತಿದ್ದರಿಂದ ಅನುಮಾನಗೊಂಡ ಪಕ್ಕದ ಮನೆಯವರು ಮನೆ ಕಡೆ ಹೋಗಿ ನೋಡಿದಾಗ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿತ್ತು.

ಆಗ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿ ಕಿಟಕಿ ಮೂಲಕ ಒಳಗೆ ಏನಾಗಿದೆ ಎಂದು ನೋಡಿದಾಗ ರಕ್ತದ ಮಡುವಿನಲ್ಲಿ ದಂಪತಿಗಳು ಬಿದ್ದಿರುವುದು ಗೋಚರಿಸಿತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್, ದೇವರಾಜ್, ನಾಗಮಂಗಲ ಡಿವೈಎಸ್‍ಪಿ ವಿಶ್ವನಾಥ್, ಸರ್ಕಲ್ ಇನ್ಸ್‍ಪೆಕ್ಟರ್ ಸುಧಾಕರ್, ಸಬ್ ಇನ್ಸ್‍ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.

ಅಲ್ಲದೆ, ಆರೋಪಿಗಳ ಪತ್ತೆಗಾಗಿ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಆರೋಪಿಗಳ ಕುರುಹು ಪತ್ತೆಗಾಗಿ ಮಾಹಿತಿ ಕಲೆ ಹಾಕಿತು. ಘಟನೆಯು ಹಣ ಮತ್ತು ಒಡವೆ ಕಳ್ಳತನ ಮಾಡಲು ನಡೆಸಿರುವ ಕೃತ್ಯವೆಂದು ಅಧಿಕಾರಗಳ ತಂಡವು ಅಭಿಪ್ರಾಯಪಟ್ಟಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗಾಗಿ ಸಿಪಿಐ ಸುಧಾಕರ್ ನೇತೃತ್ವದಲ್ಲಿ ಮೂರು ತನಿಖಾ ತಂಡ ರಚಿಸಿ ಆರೋಪಿಗಳಾಗಿ ವ್ಯಾಪಕ ಬಲೆ ಬೀಸಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಖಚಿತ ಪಡಿಸಿವೆ.

Facebook Comments