ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಪಕ್ಕದ ಮನೆಗೆ ಬೆಂಕಿಯಿಟ್ಟ ಗ್ರಾಮಸ್ಥರು..!

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ,ಜೂ.12-ಮಾನಕ್ಕೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇದಕ್ಕೆ ನೆರೆಮನೆಯವರೇ ಕಾರಣ ಎಂದು ಆರೋಪಿಸಿ ರಾತ್ರಿ ಅವರ ಮನೆಗೆ ಬೆಂಕಿ ಹಚ್ಚಿದ್ದು, ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸಾದರಹಳ್ಳಿಯಲ್ಲಿ ವಾಸವಾಗಿದ್ದ ಲೋಕೇಶ್(30) ಮತ್ತು ಕೌಸಲ್ಯ(22) ನಿನ್ನೆ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದರು.

ದಂಪತಿ ಆತ್ಮಹತ್ಯೆಗೆ ನೆರೆಮನೆ ನಿವಾಸಿ ತ್ಯಾಗರಾಜ್ ಕಾರಣ ಎಂದು ಆರೋಪಿಸಿ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಲೋಕೇಶ್ ಸಂಬಂಧಿಕರು ರಾತ್ರಿ ತ್ಯಾಗರಾಜ್ ಕುಟುಂಬದವರು ಮನೆಯಲ್ಲಿದ್ದಾಗಲೇ ಮನೆಗೆ ಬೆಂಕಿ ಹಚ್ಚಿದ್ದಾರೆ.ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮನೆಯವರನ್ನು ಹೊರಕರೆತಂದು ರಕ್ಷಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ತ್ಯಾಗರಾಜ್‍ನಿಗೆ ಸೇರಿದ ಎರಡು ಕಾರು,, ಇವರ ಮನೆಗೆ ಹೊಂದಿಕೊಂಡಿದ್ದ ಮುತ್ಯಾಲಮ್ಮ ದೇವಸ್ಥಾನದ ಬಳಿ ಭಕ್ತರೊಬ್ಬರಿಗೆ ಸೇರಿದ ಸ್ವಿಫ್ಟ್ ಕಾರು, ನಾಲ್ಕು ಬೈಕ್, ಒಂದು ಆಟೋ, ನಾಲ್ಕು ಸೈಕಲ್‍ಗಳು ಬೆಂಕಿಗೆ ಆಹುತಿಯಾಗಿರುವುದಲ್ಲದೆ ದೇವಾಲಯ ಬಳಿಯ ಒಂದು ಗುಡಿಸಲು ಹಾಗೂ ಬಣವೆ ಸಹ ಸುಟ್ಟುಹೋಗಿದೆ.

ಈ ನಡುವೆ ತ್ಯಾಗರಾಜ್ ನಾಪತ್ತೆಯಾಗಿದ್ದಾನೆ. ಒಟ್ಟಾರೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಘಟನೆಯ ತೀವ್ರತೆಯನ್ನು ಅರಿತ ಪೊಲೀಸರು ಹೆಚ್ಚಿನ ಗಸ್ತು ಹಾಕಿದ್ದಾರೆ. ಭದ್ರತಾ ನಿಯೋಜನೆಗಾಗಿ ಒಬ್ಬರು ಸಿಪಿಐ, ಮೂರು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ