ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಅಡ್ಡಿಯಾಗದಿರಲಿ ರಾಜಕೀಯ ಮೇಲಾಟ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.20- ರಾಜಕೀಯ ಮೇಲಾಟ ದಿಂದಾಗಿ ದಶಕಗಳ ಹಿಂದೆ ಕಾಮಗಾರಿ ಆರಂಭಿಸಿದ ಜಿಲ್ಲಾ ನ್ಯಾಯಾಲಯದ ಕಟ್ಟಡದ ಉದ್ಘಾಟನೆಗೆ ಇನ್ನು ಘಳಿಗೆ ಕೂಡಿ ಬಂದಿಲ್ಲದಿರುವುದು ವಿಪರ್ಯಾಸವೇ ಸರಿ. ನ್ಯಾಯಾಲಯದ ಕಟ್ಟಡ ಕಾಮಗಾರಿ ಆರಂಭವಾಗಿ ದಶಕಗಳೇ ಕಳೆದಿದ್ದು , ಇತ್ತೀಚೆಗಷ್ಟೇ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸಂಕೀರ್ಣಕ್ಕೆ ಇನ್ನು ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

ನಾಲ್ಕೈದು ನ್ಯಾಯಾಲಯಗಳನ್ನು ಒಳಗೊಂಡ ಈ ಸಂಕೀರ್ಣದಲ್ಲಿ ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಆದರೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ರಾಜಕೀಯದ ಮೇಲಾಟ ಅಡ್ಡಿಯಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟನೆ ಮಾಡುತ್ತೇವೆ ಎಂದು ಬರಿ ಬಾಯಿ ಹೇಳಿಕೆ ನೀಡುತ್ತಿರುವುದರಿಂದ ಕಟ್ಟಡ ಉದ್ಘಾಟನೆಗೆ ಮೀನಾ ಮೇಷ ಎಣಿಸುತ್ತಿರುವುದು ಏಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿರುವುದನ್ನು ಮನಗಂಡು ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿದ್ದ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯವನ್ನು 2000ದಲ್ಲೇ ಬೇರೆಡೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಹೀಗಾಗಿ 2000ನೆ ಇಸವಿಯಲ್ಲೇ ಅಂದಿನ ರಾಜ್ಯ ಸರ್ಕಾರ ಚನ್ನಪಟ್ಟಣ ಕೆರೆ ಆವರಣದಲ್ಲಿ ಬೃಹತ್ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಸ್ಥಳ ಗೊತ್ತು ಮಾಡಿತ್ತು.

ಆದರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಿದ್ದು 2015ರ ಏಪ್ರಿಲ್ ತಿಂಗಳಿನಲ್ಲಿ. ಮೊದಲ ಹಂತದ ಕಾಮಗಾರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಎಲ್.ಮಂಜುನಾಥ್ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಹೈಕೋರ್ಟ್ , ಕಲ್ಬುರ್ಗಿ ಮತ್ತು ಹುಬ್ಬಳ್ಳಿ , ಧಾರವಾಡ ಸಂಚಾರಿ ಪೀಠದ ಮಾದರಿಯಲ್ಲೇ ಈ ನ್ಯಾಯಾಲಯದ ಸಂಕೀರ್ಣವನ್ನು ವಿನ್ಯಾಸಗೊಳಿಸಲಾಗಿದೆ.

ನೆಲ ಅಂತಸ್ತು ಸೇರಿ ಒಟ್ಟು 5 ಅಂತಸ್ತಿನ ಸಂಕೀರ್ಣ ಇದಾಗಿದ್ದು ಇಷ್ಟು ವಿಸ್ತಾರವಾದ ಮತ್ತು ದೊಡ್ಡದಾದ ಕಟ್ಟಡ ಬೇರೆಡೆ ಇರುವುದು ಕಡಿಮೆ ಎನ್ನಲಾಗಿದೆ. ಮತ್ತೊಂದು ವಿಶೇಷತೆ ಎಂದರೆ ನಾಲ್ಕೂ ದಿಕ್ಕುಗಳಿಂದ ನೋಡಿದರೂ ಒಂದೇ ರೀತಿ ಕಟ್ಟಡ ಕಾಣಲಿದೆ. ಹೊಸ ಬಸ್ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಹೊಸ ಸಂಕೀರ್ಣದಲ್ಲಿ ವಕೀಲರ ಸಂಘದ ಕಟ್ಟಡ ಸ್ಟ್ಯಾಂಪ್ ಮಾರಾಟ ಮತ್ತು ಟೈಪ್‍ರೈಟಿಂಗ್ ಕೇಂದ್ರ, ಲಾ ಚೇಂಬರ್ಸ್ ಬಿಲ್ಡಿಂಗ್, ಸರ್ಕಾರಿ ಅಭಿಯೋಜಕರ ಕಚೇರಿ ಜೊತೆಗೆ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರವೂ ಇರಲಿದೆ.

ಹಲವು ಸೆಷೆನ್ಸ್ ಕೋರ್ಟ್ ಸೇರಿ ಒಟ್ಟು 19 ನ್ಯಾಯಾಲಯಗಳ ಪ್ರತ್ಯೇಕ ಕಟ್ಟಡಗಳಿವೆ. ಒಟ್ಟು 7.23 ಎಕರೆ ವಿಸ್ತಿರ್ಣದಲ್ಲಿ ತಲೆ ಎತ್ತಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಆರಂಭದಲ್ಲಿ 14 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿತ್ತು. ಅಲ್ಲದೇ ಒಂದೇ ಸಂಕೀರ್ಣದಲ್ಲಿ ಎಲ್ಲ ಮೂಲ ಸೌಲಭ್ಯ ಇರಬೇಕು ಎಂದೂ ಯೋಜನೆ ರೂಪಿಸಲಾಗಿತ್ತು.
ಇದೀಗ ಕಾಮಗಾರಿ ಮುಗಿಯುವ ವೇಳೆಗೆ ಬರೋಬ್ಬರಿ 70 ಕೋಟಿ ರೂ. ಗೂ ಹೆಚ್ಚು ವೆಚ್ಚವಾಗಿದೆ.

ಈ ಹೊಸ ನ್ಯಾಯಾಲಯ ಸಂಕೀರ್ಣ ಕೋರ್ಟ್ ಕಲಾಪ ಆರಂಭವಾದರೆ ಪಾರ್ಕಿಂಗ್ ಸೇರಿದಂತೆ ಎಲ್ಲದಕ್ಕೂ ಇಕ್ಕಟ್ಟು ಪರಿಸ್ಥಿತಿ ಇದ್ದ ಹಾಲಿ ಕಟ್ಟಡದ ಆವರಣದಲ್ಲಿ ಒತ್ತಡದ ಕಿರಿಕಿರಿ ತಪ್ಪಲಿದೆ. ಡಿಸಿ ಕಚೇರಿ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು ಎಲ್ಲವೂ ಒಂದೇ ಕಡೆ ಇರುವುದರಿಂದ ಈ ಪ್ರದೇಶದಲ್ಲಿ ಜನದಟ್ಟಣೆಯೂ ಕಡಿಮೆಯಾಗಲಿದೆ.

ಒಟ್ಟಾರೆ ನ್ಯಾಯಾಲಯದ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಮುಗಿಯಲು ಒಂದೂವರೆ ದಶಕ ಕಳೆದಿದೆ ಇಂದು ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದ್ದು ರಾಜಕೀಯ ಮೇಲಾಟ ಬಿಟ್ಟು ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಬೃಹತ್ ನ್ಯಾಯಾಲಯ ಕಟ್ಟಡ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು ಎಂದು ಎಲ್ಲರ ಒತ್ತಾಯವಾಗಿದೆ.

-ಸಂತೋಷ್ . ಸಿ ಬಿ, ಹಾಸನ

Facebook Comments