ಕೊರೊನಾ ನಿಗ್ರಹ ಕೊವ್ಯಾಕ್ಸಿನ್ ಲಸಿಕೆಯ ಮಾನವ ಪ್ರಯೋಗ ಶೀಘ್ರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.7- ಭಾರತದ ಕೊರೊನಾ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿರುವ ದೇಶದ ಪ್ರಪ್ರಥಮ ಕೋವಿಡ್-19 ವೈರಸ್ ನಿಗ್ರಹ ಲಸಿಕೆಯನ್ನು 375 ಜನರ ಮೇಲೆ ಪ್ರಯೋಗಿಸುವ ಹ್ಯೂಮನ್ ಟ್ರಯಲ್ (ಮಾನವ ಪ್ರಯೋಗ) ಶೀಘ್ರ ಆರಂಭವಾಗಲಿದೆ.

ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಮುನ್ನವೇ ದೇಶದ ಪ್ರಪ್ರಥಮ ಕೋವಿಡ್-19 ವೈರಸ್ ನಿಗ್ರಹ ಲಸಿಕೆ ಕೊವ್ಯಾಕ್ಸಿನ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು.

ಈ ನಿಟ್ಟಿನಲ್ಲಿ ದೆಹಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಅಹರ್ನಿಷಿ ಕಾರ್ಯೋನ್ಮುಖವಾಗಿತ್ತು. ಅಲ್ಲದೆ, ಬೆಳಗಾವಿ ಸೇರಿದಂತೆ ದೇಶದ 15 ಕೇಂದ್ರಗಳಿಗೆ ಈ ಸಂಬಂಧ ಪ್ರಯೋಗ ನಡೆಸಿ ಅಂತಿಮ ವರದಿ ನೀಡುವಂತೆ ಐಸಿಎಂಆರ್ ಸೂಚಿಸಿತ್ತು.

ಆಗಸ್ಟ್ 15ರೊಳಗೆ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸುವುದು ಅಸಾಧ್ಯ. ಕನಿಷ್ಟ 5 ತಿಂಗಳು ಅಥವಾ ವರ್ಷಾಂತ್ಯದವರೆಗೂ ಸಮಯಾವಕಾಶ ಬೇಕಾಗುತ್ತದೆ ಎಂದು ಬಹುತೇಕ ವೈರಾಣು ತಜ್ಞರು ಮತ್ತು ಸಂಶೋಧಕರು ಅಭಿಪ್ರಾಯಪಟ್ಟು ಐಸಿಎಂಆರ್‍ಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಈಗ 365 ರೋಗಿಗಳ ಮೇಲೆ ಹಂತ ಹಂತವಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲು ಐಸಿಎಂಆರ್ ನಿರ್ಧರಿಸಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಸಮ್ಮತಿ ನೀಡಿದ್ದು, ಶೀಘ್ರವೇ 375 ಜನರ ಮೇಲೆ ಅತ್ಯಂತ ಎಚ್ಚರಿಕೆಯಿಂದ ಈ ಲಸಿಕೆ ಪ್ರಯೋಗ ಆರಂಭವಾಗಲಿದೆ.

ಈ ಪ್ರಯೋಗದ ವೇಳೆ ಲಸಿಕೆಯ ಸಾಧಕ-ಬಾಧಕ ಮತ್ತು ಅಡ್ಡ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಅತ್ಯಂತ ಸುರಕ್ಷಿತ ಮತ್ತು ನಿಖರವಾದ ಕೊವ್ಯಾಕ್ಸಿನ್ ಲಸಿಕೆಯನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ಸಿದ್ಧಪಡಿಸಲಾಗುತ್ತದೆ.

ಐಸಿಎಂಆರ್ ಉನ್ನತ ಮೂಲಗಳ ಪ್ರಕಾರ, ಈ ಪ್ರಯೋಗ ಪೂರ್ಣಗೊಂಡು ಪರಿಪೂರ್ಣ ಲಸಿಕೆ ಸಿದ್ಧವಾಗಲು ಕನಿಷ್ಟ 5 ರಿಂದ 6 ತಿಂಗಳು ಬೇಕಾಗುತ್ತದೆ. ಐಸಿಎಂಆರ್‍ನ ಎಲ್ಲ ಶಾಖಾ ಕಚೇರಿಗಳು ಮತ್ತು ಇತರ ಕೇಂದ್ರಗಳಲ್ಲಿ ಅಂತಿಮ ಹಂತದ ಮಾನವ ಪ್ರಯೋಗ ನಡೆಯಲಿದ್ದು, ಇವೆಲ್ಲವುಗಳ ಫಲಿತಾಂಶವನ್ನು ಕ್ರೋಢೀಕರಿಸಿ ಅಂತಿಮವಾಗಿ ಕೊವ್ಯಾಕ್ಸಿನ್ ಸ್ಪಷ್ಟ ರೂಪದ ಲಸಿಕೆ ಲಭ್ಯವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಈ ನಡುವೆ ಮತ್ತೊಂದು ಪರಿಣಾಮಕಾರಿ ಔಷಧಿ ಎಂದೇ ಪರಿಗಣಿತವಾಗಿರುವ ರೆಮಿಡಿಸಿವಿಯರ್ ಔಷಧಿಯನ್ನು 4800ರೂ.ಗಳಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Facebook Comments