BIG NEWS : ಭಾರತದಲ್ಲಿ ಒಂದೇ ದಿನ 6,977 ಮಂದಿಗೆ ಕೊರೋನಾ ಪಾಸಿಟಿವ್, 4,000 ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 25-ಭಾರತದಲ್ಲಿ ವಿನಾಶಕಾರಿ ಕೊರೊನಾ ವೈರಸ್ ದಾಳಿಯ ವೇಗ ಮತ್ತಷ್ಟು ತೀವ್ರಗೊಂಡಿದೆ. ಸಾಂಕ್ರಾಮಿಕ ರೋಗದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.  ದೇಶದಲ್ಲಿ ಮೃತರ ಸಂಖ್ಯೆ 4,000 ದಾಟಿದ್ದು, 1.39 ಲಕ್ಷ ಮಂದಿ ಸಾಂಕ್ರಾಮಿಕ ರೋಗದಿಂದ ಬಳಸುತ್ತಿದ್ದು, ಸಾವು ಮತ್ತು ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ನಿನ್ನೆ ಒಂದೇ ದಿನ ಅಂದರೆ 24 ತಾಸುಗಳ ಅವಧಿಯಲ್ಲಿ 6,977 (ನಿನ್ನೆ 6,767, ಮೊನ್ನೆ 6,654, ಮೊನ್ನೆಗೂ ಹಿಂದಿನ ದಿನ 6,088 ಕೇಸ್) ಜನರಿಗೆ ಸೋಂಕು ದೃಢಪಟ್ಟಿದೆ. ಇದು ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ಭಾರೀ ಜಿಗಿತವಾಗಿದ್ದು, ಹೊಸ ದಾಖಲೆಯಾಗಿದೆ.

ಇದೇ ಅವಧಿಯಲ್ಲಿ ಒಟ್ಟು 154 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 4,021ಕ್ಕೇರಿದೆ. ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 1.39 ಲಕ್ಷಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದು ಸರಾಸರಿ 6,000 ಸೋಂಕು ಪ್ರಕರಣಗಳು ದಾಖಲಾದ ನಾಲ್ಕನೇ ದಿನ.

ಅಲ್ಲದೇ ಕಳೆದ 10 ದಿನಗಳಿಂದ ನಿರಂತರವಾಗಿ 5,500 ಪಾಸಿಟಿವ್ ಕೇಸ್‍ಗಳು ದಾಖಲಾಗಿದೆ. ಜೂನ್‍ನಲ್ಲಿ ಸೋಂಕು ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಆತಂಕವಿದ್ದು, ಅದಕ್ಕೆ ಮುನ್ಸೂಚನೆಯಾಗಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮೇ 1ರಿಂದಲೂ ಅತಿ ಹೆಚ್ಚು ಸೋಂಕು ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇ ಇದ್ದು, ದಿನೇ ದಿನೇ ಆಘಾತಕಾರಿ ಮಟ್ಟದಲ್ಲಿ ಉಲಗೊಳ್ಳುತ್ತಿದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 154 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 58, ದೆಹಲಿ 30. ಗುಜರಾತ್ 29, ಮಧ್ಯಪ್ರದೇಶ 9, ತಮಿಳುನಾಡು 8, ಉತ್ತರ ಪ್ರದೇಶ 6, ತೆಲಂಗಾಣ 4, ರಾಜಸ್ತಾನ ಮತ್ತು ಪಶ್ಚಿಮಬಂಗಾಳ ತಲಾ ಮೂರು, ಬಿಹಾರ 2 ಹಾಗೂ ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯದಲ್ಲಿ ತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 4,021ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 1,38,845 ತಲುಪಿದೆ. ಇಂದು ಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ 1.42 ಲಕ್ಷ ದಾಟುವ ಆತಂಕವೂ ಇದೆ.

ಈವರೆಗೆ ಸಂಭವಿಸಿರುವ 4,021 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 858 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (290), ಪಶ್ಚಿಮ ಬಂಗಾಳ (272), ದೆಹಲಿ (261), ರಾಜಸ್ತಾನ (163), ಉತ್ತರ ಪ್ರದೇಶ (161), ತಮಿಳುನಾಡು (111), ಆಂಧ್ರಪ್ರದೇಶ (56), ತೆಲಂಗಾಣ (53), ಕರ್ನಾಟಕ(42), ಹಾಗೂ ಪಂಜಾಬ್ (40) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 21, ಹರಿಯಾಣ 16, ಬಿಹಾರ 13, ಒಡಿಶಾ ಏಳು, ಕೇರಳ, ಜಾರ್ಖಂಡ್ ಮತ್ತು ಅಸ್ಸಾಂ ತಲಾ ನಾಲ್ಕು, ಚಂಡೀಗಢ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ತಲಾ ಮೂರು ಹಾಗೂ ಪುದುಚೇರಿ, ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.  ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 77,103ರಷ್ಟಿದೆ. ಈ ಮಧ್ಯೆ, ಈವರೆಗೆ 57,720(ಚೇತರಿಕೆ ಪ್ರಮಾಣ ಶೇ.41.57) ಮಂದಿ ಗುಣಮುಖರಾಗಿದ್ದಾರೆ.

ಲಾಕ್‍ಡೌನ್ ಸಡಿಲ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾ ಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.41.57ರಷ್ಟಿದ್ದು, ಗುಣಮುಖವಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ಧಿ ಕಂಡು ಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೆಲವು ನಿರ್ಬಂಧಗಳ ಸಡಿಲಿಕೆಯೊಂದಿಗೆ ನಾಲ್ಕನೇ ಹಂತದ ಲಾಕ್‍ಡೌನ್ ಜÁರಿಯಲ್ಲಿದ್ದು, ಇದರ ಬೆನ್ನಲ್ಲೇ ಆತಂಕಕಾರಿ ವಾತಾವರಣವೂ ನಿರ್ಮಾಣವಾಗಿದೆ. ಜೂನ್‍ನಲ್ಲಿ ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಮತ್ತು ಸಾವು ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Facebook Comments