ಆಗಷ್ಟ್ ವೇಳೆಗೆ ಕೊರೋನಾ 3ನೇ ಅಲೆ ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.19-ದೇಶದೆಲ್ಲೆಡೆ ಲಾಕ್‍ಡೌನ್ ಅನ್‍ಲಾಕ್ ಮಾಡುತ್ತಿರುವ ಬೆನ್ನಲ್ಲೇ ಆಗಷ್ಟ್ ತಿಂಗಳ ವೇಳೆಗೆ ಕೊರೊನಾ ಮೂರನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಏಮ್ಸ್ ಮುಖ್ಯಸ್ಥ ಡಾ.ರಣದಿಪ್ ಗುಲೇರಿಯಾ ಅವರು ಮೂರ್ನಾಲ್ಕು ವಾರಗಳಲ್ಲಿ ಮೂರನೆ ಅಲೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ದೇಶದ ಕೆಲವು ರಾಜ್ಯಗಳಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗುತ್ತಿರುವುದರಿಂದ ಜನ ಕೊರೊನಾ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಮೂರನೇ ಅಲೆ ಆಗಷ್ಟ್ ತಿಂಗಳಲ್ಲಿ ಕಾಣಿಸಿಕೊಂಡರೂ ಆಚ್ಚರಿಪಡುವಂತಿಲ್ಲ ಎಂದಿದ್ದಾರೆ.

ಮೊದಲ ಮತ್ತು ಎರಡನೆ ಅಲೆಯ ಸಂದರ್ಭದಲ್ಲಿ ಸಂಭವಿಸಿದ ಸಾವು-ನೋವುಗಳಿಂದ ಪಾಠ ಕಲಿಯುವಲ್ಲಿ ನಾವು ಎಡವುತ್ತಿರುವುದರಿಂದ ಮೂರನೆ ಅಲೆಯ ಭೀಕರತೆ ಎದುರಿಸಲು ಸಜ್ಜಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜನ ಹಳೆಯದ್ದನ್ನು ಮರೆತು ಮತ್ತೆ ಗುಂಪುಗೂಡುತ್ತಿರುವುದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕೊರೊನಾ ಸೋಂಕು ಕೆಲವೇ ದಿನಗಳಲ್ಲಿ ತನ್ನ ಕರಾಳತೆ ತೋರಲಿದೆ. ಅದು ದೂರವೇನಿಲ್ಲ. ಆಗಷ್ಟ್ ವೇಳೆಗೆ ಮೂರನೆ ಅಲೆಯ ಪ್ರಭಾವ ಎದುರಿಸುವುದು ಅನಿವಾರ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

Facebook Comments

Sri Raghav

Admin