ಕೊರೋನಾ ಹಿಡಿತದಲ್ಲಿ ಭಾರತ, 15 ದಿನಗಳಲ್ಲಿ 70 ಸಾವಿರ ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 26-ಭಾರತದಲ್ಲಿ ಭಾರೀ ವೇಗದಲ್ಲಿ ಕೊರೊನಾ ದಾಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಕೇವಲ 15 ದಿನಗಳಲ್ಲಿ 70,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ದೇಶದ ಆಘಾತಕಾರಿ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣಗಳಲ್ಲಿ ವಿಶ್ವದಲ್ಲೇ 10 ಸ್ಥಾನದಲ್ಲಿರುವ ಭಾರತದಲ್ಲಿ ದಿನೇ ದಿನೇ ಸಾಂಕ್ರಾಮಿಕ ರೋಗಿಗಳು ಮತ್ತು ರೋಗ ಪೀಡಿತರ ಸಾವಿನ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ.

ಮಾಧ್ಯಮವೊಂದರ ವಿಶ್ಲೇಷಣೆಯಂತೆ ದೇಶದಲ್ಲಿ ಕೇವಲ 15 ದಿನಗಳಲ್ಲಿ 70,000 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು, ಒಟ್ಟು 25 ದಿನಗಳಲ್ಲಿ 1 ಲಕ್ಷ ಮಂದಿಗೆ ಸೋಂಕು ತಗುಲಿದೆ.ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿ ಮೊದಲ ಮೂರು ಸ್ಥಾನಗಳಲ್ಲಿದೆ.

ಕಳೆದ ಮೂರು ದಿನಗಳಿಂದ ಕೋವಿಡ್-19 ಸೋಂಕು ಪ್ರಕರಣದಲ್ಲಿ ಶೇ. 11ರಷ್ಟು ಹೆಚ್ಚಳ ಕಂಡು ಬಂದಿರುವುದು ಆತಂಕಕಾರಿಯಾಗಿದೆ ಎಂದು ಮಾಧ್ಯಮ ವಿಶ್ಲೇಷಣಾ ವರದಿಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಕಳೆದ ಐದು ದಿನಗಳಿಂದಲೂ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಮೊನ್ನೆ ಸುಮಾರು 7,000 ಮಂದಿಗೆ ಮತ್ತು ನಿನ್ನೆಯೂ ಕೂಡ 6,000ಕ್ಕೂ ಹೆಚ್ಚು ಜನರಿಗೆ ಅಂಟು ರೋಗ ತಗುಲಿದ್ದು, ಸಾಂಕ್ರಾಮಿಕ ರೋಗಗಳ ಸಂಖ್ಯೆ 1.45 ಲಕ್ಷ ದಾಟಿದೆ.

ಜೂನ್‍ನಲ್ಲಿ ಸೋಂಕು ಹಾವಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೂರು ಮತ್ತು ನಾಲ್ಕನೇ ವಾರದಲ್ಲಿ ಪ್ರತಿ ದಿನ ಸುಮಾರು 7,500 ಮಂದಿ ರೋಗದಿಂದ ನರಳುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

Facebook Comments