ಅಮೆರಿಕದಲ್ಲಿ ಕೊರೊನಾ 2ನೇ ಅಲೆ ತೀವ್ರವಾದರೂ ಸಾವಿನ ಸಂಖ್ಯೆ ಇಳಿಮುಖ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಅ.27- ಯೂರೋಪ್ ಮತ್ತು ಅಮೆರಿಕದಲ್ಲಿ ಕಿಲ್ಲರ್ ಕೊರೊನಾ ವೈರಸ್‍ನ 2ನೇ ಅಲೆ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದರೂ ಮೊದಲ ಹಂತದ ದಾಳಿಗೆ ಹೋಲಿಸಿದ್ದಲ್ಲಿ ಸಾವಿನ ಪ್ರಕರಣಗಳು ಕ್ಷೀಣಿಸಿವೆ ಎಂಬುದು ಸಮಾಧಾನಕರ ಸಂಗತಿ.  ಸೆಪ್ಟೆಂಬರ್‍ನಿಂದ ಯೂರೋಪ್ ಖಂಡದ ಹತ್ತು ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಕೋವಿಡ್-19 ವೈರಸ್‍ನ 2ನೇ ದಾಳಿ ಆರಂಭವಾಗಿದ್ದು, ಕೆಲವೇ ವಾರಗಳಲ್ಲಿ ಶೇ.30ರಷ್ಟು ಸೋಂಕು ಪ್ರಕರಣಗಳ ಹೆಚ್ಚಳ ವರದಿಯಾಗಿದೆ.

ವಾಷಿಂಗ್ಟನ್‍ನ ಜಾನ್ ಹಾಫ್‍ಕಿಂಗ್ಸ್ ಯೂನಿವರ್ಸಿಟಿಯ ಮಾಹಿತಿ ಪ್ರಕಾರ ಮೊದಲ ಅಲೆಗಿಂತ 2ನೇ ಅಲೆಯೂ ತೀವ್ರ ಸ್ವರೂಪದ್ದಾಗಿದ್ದರೂ ಅಮೆರಿಕ ಮತ್ತು ಯೂರೋಪ್‍ನಲ್ಲಿ ಸಾವಿನ ಪ್ರಮಾಣ ಕ್ಷೀಣಿಸಿದೆ.  ಅಮೆರಿಕದ 50 ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ 2ನೇ ಅಲೆ ಆರ್ಭಟ ಇದ್ದರೂ ಒಂದೊಂದು ಪ್ರದೇಶದಲ್ಲಿ ಇದರ ತೀವ್ರತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.

ಕೆಲವೆಡೆ ದಿನನಿತ್ಯದ ಸೋಂಕು, ಸಕ್ರಿಯ ಪ್ರಕರಣಗಳು ಮತ್ತು ದಾಳಿಯ ಸ್ವರೂಪ ತೀವ್ರವಾಗಿದ್ದರೆ ಹಲವೆಡೆ ಕೋವಿಡ್ ಅಬ್ಬರ ತಗ್ಗಿದೆ. ಅಮೆರಿಕ, ಫ್ರಾನ್ಸ್, ಸ್ಪೇನ್, ಬ್ರೆಜಿಲ್, ಮೆಕ್ಸಿಕೊ, ಇಂಗ್ಲೆಂಡ್, ಪೆರು, ಕೊಲಂಬಿಯ ಮೊದಲಾದ ದೇಶಗಳು ಕೊರೊನಾ 2ನೇ ದಾಳಿಯಿಂದ ನಲುಗುತ್ತಿದೆ. ಸೋಂಕಿತರ ಸಂಖ್ಯೆ ಕ್ಷಿಪ್ರವಾಗಿ ಏರುತ್ತಿದ್ದರೂ ಸಮಾಧಾನಕರ ಸಂಗತಿ ಎಂದರೆ ಮೊದಲಿನ ಅಲೆಯಷ್ಟು ಸಾವಿನ ತೀವ್ರತೆ ಇಲ್ಲ.

ಅಮೆರಿಕ ಮತ್ತು ಯೂರೋಪ್ ಖಂಡಗಳ ದೇಶಗಳಲ್ಲಿ ಕೊರೊನಾ ದಾಳಿಯ ಮೊದಲ ಅಲೆ ಇನ್ನು ಪೂರ್ಣವಾಗಿ ಶಮನಗೊಂಡಿಲ್ಲ. ಇದರ ನಡುವೆಯೇ 2ನೇ ಅಲೆಯ ಹಾವಳಿ ಒಕ್ಕರಿಸಿಕೊಂಡಿದೆ. ಆದರೆ ಮೊದಲಿನಷ್ಟು ತೀವ್ರ ಇಲ್ಲದಿರುವುದು ಜನರಲ್ಲಿ ನಿರಾಳತೆ ಮೂಡಿಸಿದೆ.  ದಿನನಿತ್ಯದ ಸೋಂಕು, ಸಕ್ರಿಯ ಪ್ರಕರಣಗಳಲ್ಲಿ ಅಮೆರಿಕ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದ್ದು, ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಸೋಂಕಿನ ಆರ್ಭಟ ಹೆಚ್ಚಳವಾಗಿದೆ.

ಆದಾಗ್ಯೂ ಏಪ್ರಿಲ್‍ನಲ್ಲಿ ಕಂಡುಬಂದ ಕೋವಿಡ್ ವೈರಸ್‍ನ ದಾಳಿಯಷ್ಟು 2ನೇ ಅಲೆ ತೀವ್ರವಾಗಿಲ್ಲ ಎಂದು ಜಾನ್ ಹಾಫ್‍ಕಿಂಗ್ಸ್ ವಿಶ್ವವಿದ್ಯಾಲಯದ ಆರೋಗ್ಯ ತಜ್ಞರು ಹೇಳಿದ್ದಾರೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳ ಮತ್ತು ಒಂದು ದೇಶದಿಂದ ಇನ್ನೊಂದು ದೇಶದ ನಡುವೆ ಕೊರೊನಾ ಹಾವಳಿಯ ಏರಿಳಿತಗಳು ಮತ್ತು ಅವುಗಳ ಕಾರಣಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮುಂದುವರೆದಿದೆ.

ಸಾರ್ಸ್ ವೈರಸ್‍ನ ಮೂಲವಾದ ಕೋವಿಡ್-19 ವೈರಸ್ ವಿಶ್ವದಲ್ಲಿ ಒಟ್ಟು ಮೂರು ಅಲೆಗಳಾಗಿ ದಾಳಿ ನಡೆಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೆಲವು ರಾಷ್ಟ್ರಗಳಲ್ಲಿ ಈಗ ಮೊದಲ ಅಲೆಯ ಅಂತಿಮ ಮತ್ತು ನಿರ್ಣಾಯಕ ಘಟ್ಟ ತಲುಪಿದೆ. ಕೆಲವೆಡೆ 2ನೇ ದಾಳಿಯ ಅಲೆ ಈಗಷ್ಟೇ ಶುರುವಾಗಿದೆ. ಚಳಿಗಾಲದ ಮಧ್ಯಭಾಗದಲ್ಲಿ 3ನೇ ಅಲೆ ಕಾಣಿಸಿಕೊಳ್ಳುವ ನಿರೀಕ್ಷೆಯಿದ್ದು, ಈ ಹೆಮ್ಮಾರಿಯನ್ನು ತಡೆಗಟ್ಟಲು ಮತ್ತು ಲಸಿಕೆ ಮೂಲಕ ಪೀಡೆಗೆ ಕಡಿವಾಣ ಹಾಕಲು ನಿರಂತರ ಯತ್ನಗಳು ಮುಂದುವರೆದಿವೆ.

Facebook Comments