ಅನುಮೋದನೆ ಇಲ್ಲದೆ ಕೊರೊನಾ ಔಷಧಿ ಬಳಕೆ, ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.29- ಪ್ರಾಯೋಗಿಕ ಹಂತದಲ್ಲಿರುವ ಕೊರೊನಾ ಔಷಧಿಗಳನ್ನು ಸೂಕ್ತ ಅನುಮೋದನೆ ಇಲ್ಲದೆ ಬಳಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಇಂದು ನೋಟಿಸ್ ಜಾರಿಗೊಳಿಸಿದೆ.

ರೆಮಿಡಿಸಿವೇರ್, ಫ್ಯಾಬಿ ಪರಿವಿರ್ ಮೊದಲಾದ ಕೋವಿಡ್-19 ನಿಗ್ರಹ ಔಷಧಿಗಳನ್ನು ವೈರಸ್ ಸೋಂಕು ಚಿಕಿತ್ಸೆಗಾಗಿ ಸೂಕ್ತ ಅನುಮೋದನೆ ಇಲ್ಲದೆ ಬಳಸಲಾಗುತ್ತಿದೆ. ಇದರಿಂದ ರೋಗಿಗಳಿಗೆ ಅಪಾಯವಾಗುತ್ತದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು.

ಈ ಸಂಬಂಧ ಇಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂಕೋರ್ಟ್ ಪ್ರಯೋಗದ ವಿವಿಧ ಹಂತಗಳಲ್ಲಿರುವ ಔಷಧಿಗಳನ್ನು ಸೂಕ್ತ ಸಮ್ಮತಿ ಇಲ್ಲದೆ ಉಪಯೋಗಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಆಕ್ಷೇಪ ವ್ಯಕ್ತಪಡಿಸಿ ಕೇಂದ್ರಕ್ಕೆ ಪ್ರತ್ಯುತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.

ವಿವಿಧ ಔಷಧ ತಯಾರಿಕಾ ಸಂಸ್ಥೆಗಳು ಈಗಾಗಲೇ ಅಲ್ಪ ತೀವ್ರತೆಯ ಕೊರೊನಾ ನಿಗ್ರಹಕ್ಕಾಗಿ ಕೆಲವು ಔಷಧಿಗಳನ್ನು ಅಭಿವೃದ್ಧಿಗೊಳಿಸಿದೆ. ಆದರೆ, ತೀವ್ರ ಪ್ರಕರಣಗಳ ಚಿಕಿತ್ಸೆಗೆ ಇಂತಹ ಔಷಧಿಗಳು ಪರಿಣಾಮಕಾರಿ ಮತ್ತು ಸುರಕ್ಷಿತವಲ್ಲ.

ಅನೇಕ ಕಂಪೆನಿಗಳ ಔಷಧಿಗಳು ಮತ್ತು ಮಾತ್ರೆಗಳು ಪ್ರಯೋಗದ ವಿವಿಧ ಹಂತಗಳಲ್ಲಿದ್ದು, ಐಸಿಎಂಆರ್ ಸೇರಿದಂತೆ ಕೆಲವು ಆರೋಗ್ಯ ಸಂಸ್ಥೆಗಳಿಂದ ಸಮರ್ಪಕ ಅನುಮೋದನೆ ಪಡೆದಿಲ್ಲ. ಇವುಗಳನ್ನು ಅಂತಿಮ ಪರೀಕ್ಷಾ ಫಲಿತಾಂಶದ ನಂತರವಷ್ಟೇ ಬಳಸಬೇಕೆಂದು ನಿರ್ದೇಶನ ನೀಡಲಾಗಿದೆ. ಆದಾಗ್ಯೂ ಇವುಗಳನ್ನು ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.

Facebook Comments