ಭಾರತದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.20 (ಪಿಟಿಐ)- ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಸಂತಸದ ನಡುವೆ ಒಂದೇ ದಿನದಲ್ಲಿ 13,933 ಹೊಸ ಪ್ರಕರಣಗಳು ದಾಖಲಾಗಿ, ಸಂತಸಕ್ಕೆ ತಣ್ಣೀರೆರೆಚಿದೆ. ಕಳೆದ ಇಪ್ಪತ್ತೆರಡು ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿತರನ್ನು ಗುರುತಿಸಲಾಗಿರಲಿಲ್ಲ. ಆದರೆ, ನಿನ್ನೆ ಏಕ ದಿನದಲ್ಲಿ ಸುಮಾರು 14 ಸಾವಿರ ಸೋಂಕಿನ ಪ್ರಕರಣಗಳು ದಾಖಲಾಗಿ ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆಯನ್ನು 1,09,77,387ಕ್ಕೆ ತಲುಪಿದೆ.

ಅದೇ ರೀತಿ ಕೊರೊನಾ ವಾಸಿಯಾದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಅಂದರೆ, 1,06,78,048 ಮಂದಿ ಗುಣಮುಖರಾಗಿ ಆರೋಗ್ಯದಿಂದ ಜೀವಿಸುತ್ತಿದಾರೆ ಎಂದು ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯ ವರದಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 13,933 ಹೊಸ ಕೇಸ್‍ಗಳು ದಾಖಲಾದರೆ, ಪ್ರತಿದಿನದ ಸಾವಿನ ಸಂಖ್ಯೆ 101ಕ್ಕೇರಿದೆ. ಇದು ಶನಿವಾರ ಬೆಳಗ್ಗೆ 8 ಗಂಟೆಯ ಮಾಹಿತಿ.

ಹೊಸ ವರ್ಷದ ಜ.29 ರಂದು ಒಂದೇ ದಿನ 18,855 ಪ್ರಕರಣಗಳು ದಾಖಲಾಗಿದ್ದವು. ಅಂದಿನಿಂದ ಕೋವಿಡ್-19 ಸೋಂಕಿತ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು. ಆದರೆ, ನಿನ್ನೆ ಸುಮಾರು 14 ಸಾವಿರ ಹೊಸ ಪ್ರಕರಣಗಳು ದಾಖಲಾಗಿ, ರೂಪಾಂತರ ಕೊರೊನಾ ಮುನ್ಸೂಚನೆಯನ್ನು ನೀಡಿದೆ. ಆದ್ದರಿಂದ ನಾಗರಿಕರು ಮುನ್ನೆಚ್ಚರಿ ಕ್ರಮಗಳ ಅನುಸರಿಸುವುದನ್ನು ಮುಂದುವರಿಸಬೇಕಾಗಿದೆ.

ರಾಷ್ಟ್ರೀಯ ಚೇತರಿಕೆ ಪ್ರಮಾಣ ಎಂದಿನಂತೆ ಶೇ.97.27ರಷ್ಟನ್ನು ಕಾಯ್ದುಕೊಂಡಿರುವುದು ಸಂತೋಷಕರ ಸಂಗತಿ ಹಾಗೂ ಮಟ್ಟದಲ್ಲಿ ಇದು ಉತ್ತಮ ಎಂದು ಇಲಾಖೆ ತಿಳಿಸಿದೆ.

Facebook Comments