ದೇಶದಲ್ಲಿ ಕೊರೊನಾ ರುದ್ರತಾಂಡವ, 10,000 ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 16-ಕಿಲ್ಲರ್ ಕೊರೊನಾ ವೈರಸ್ ದಾಳಿ ಭಾರತದಲ್ಲಿ ಅಪಾಯಕಾರಿ ಹಂತ ತಲುಪಿದೆ. ದೇಶದಲ್ಲಿ 24 ಗಂಟೆಗಳಲ್ಲಿ 10,667 ಸೋಂಕು ಮತ್ತು 380 ಸಾವುಗಳು ವರದಿಯಾಗಿರುವುದು ಪ್ರಸ್ತುತ ಭಯಾನಕ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ಕಳೆದ 24 ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಗುಣ ಮಟ್ಟದಲ್ಲಿಯೇ ಮುಂದುವರೆದಿದ್ದು, ಸಾವಿನ ಸಂಖ್ಯೆಯೂ ಆತಂಕಕಾರಿಯಾಗಿದೆ. ದೇಶದಲ್ಲಿ ಸತತ ಐದು ದಿನಗಳಿಂದ ಮೃತರ ಸಂಖ್ಯೆ 300 ಮೀರಿರುವುದು ಸಹ ಆಘಾತಕಾರಿ ವಿದ್ಯಮಾನವಾಗಿದೆ.

ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 3,50 ಲಕ್ಷ ಸನಿಹದಲ್ಲಿದ್ದು, ಒಟ್ಟು 9,952 ಮಂದಿ ಮೃತಪಟ್ಟಿದ್ದಾರೆ. ಇಂದು ರಾತ್ರಿ ವೇಳೆಗೆ ಸಾವಿನ ಸಂಖ್ಯೆ 10,000ಕ್ಕೇರುವ ಆತಂಕವಿದೆ. ಅಲ್ಲದೇ ಸತತ 13 ದಿನಗಳಿಂದ ಸೋಂಕಿತರ ಸಂಖ್ಯೆ 9,000+ ಪ್ರಮಾಣದಲ್ಲೇ ಮುಂದುವರೆದಿದೆ.

ನಿನ್ನೆ ಒಂದೇ ದಿನ 10,667 (ಶನಿವಾರ 11,929, ಶುಕ್ರವಾರ 11,458, ಗುರುವಾರ 10,956 ಬುಧವಾರ 9.996, ಮಂಗಳವಾರ 9,985, ಸೋಮವಾರ 9,987 ಭಾನುವಾರ 9,983, 9,971, ಶನಿವಾರ 9,971, ಶುಕ್ರವಾರ 9,887, ಗುರುವಾರ 9,851 ಮತ್ತು ಬುಧವಾರ 9,304) ಸೋಂಕು ಕೇಸ್‍ಗಳು ವರದಿಯಾಗಿದೆ.

ಸೋಂಕು ಪ್ರಮಾಣದಲ್ಲಿ ಭಾರತ ಈಗ ನಾಲ್ಕನೇ ಸ್ಥಾನದಲ್ಲಿ ಹಾಗೂ ಸಾವಿನ ಸಂಖ್ಯೆಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ 16ನೇ ದಿನವೂ ಆತಂಕಕಾರಿ ಮಟ್ಟದಲ್ಲಿ ನಿರಂತರವಾಗಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 10,300 ಮತ್ತು ಸೋಂಕು ಬಾಧಿತರ ಸಂಖ್ಯೆ 3.50 ಲಕ್ಷ ತಲುಪುವ ಆತಂಕವಿದೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 380 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 9,952ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 3.50 ಲಕ್ಷ ಸನಿಹದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಈ ಆಘಾತಕಾರಿ ಸನ್ನಿವೇಶದ ನಡುವೆಯೇ ಭಾರತವು ಸೋಂಕು ಪ್ರಮಾಣದಲ್ಲಿ ಬ್ರಿಟನ್‍ನನ್ನು ಹಿಂದಿಕ್ಕಿ ಈಗ ನಾಲ್ಕನೇ ಸ್ಥಾನಕ್ಕೇರಿದೆ. ಎರಡು ದಿನಗಳ ಹಿಂದಷ್ಟೇ ಭಾರತ ಐದನೇ ಸ್ಥಾನದಲ್ಲಿತ್ತು.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮೂರನೇ ಸ್ಥಾನದಲ್ಲಿರುವ ರಷ್ಯಾವನ್ನು ಹಿಂದಿಕ್ಕುವ ಕಾಲ ದೂರವಿಲ್ಲ. ಡಿಸೆಂಬರ್‍ವರೆಗೂ ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿಯಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Facebook Comments